ಬೆಂಗಳೂರು,ಆ.26– ತೀವ್ರ ವಿರೋಧದ ನಡುವೆಯೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ವತಿಯಿಂದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಗ್ರೂಪ್ ಎ ಮತ್ತು ಬಿ ವೃಂದದ 344 ಹುದ್ದೆಗಳಿಗೆ ನಾಳೆ ಭಾರಿ ಬಿಗಿ ಭದ್ರತೆ ನಡುವೆ ಪೂರ್ವಭಾವಿ ಪರೀಕ್ಷೆ (ಪ್ರಿಲಿಮನರಿ ಎಕ್ಸಾಂ) ನಡೆಯಲಿದೆ.
ಪರೀಕ್ಷೆಯನ್ನು ಮುಂದೂಡಬೇಕೆಂದು ಕೆಲ ವಿದ್ಯಾರ್ಥಿಗಳು ರಾಜ್ಯಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸೊಪ್ಪು ಹಾಕದ ಸರ್ಕಾರ ಈಗಾಗಲೇ ನಿಗದಿಯಾಗಿರುವಂತೆ ನಾಳೆ ರಾಜ್ಯದ ಒಟ್ಟು 700 ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಿದೆ.
ಕೆಪಿಎಸ್ಸಿಯ 384 ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಒಟ್ಟು 2,10,541 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದು, ಯಾವುದೇ ರೀತಿಯ ನಕಲು, ಅಹಿತಕರ ಘಟನೆ ನಡೆಯಂದತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಪರೀಕ್ಷೆಯು ಬೆಳಿಗ್ಗೆ 10 ರಿಂದ 12 ಹಾಗೂ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು 2 ಗಂಟೆ ಮುಂಚಿತವಾಗಿಯೇ ಕಡ್ಡಾಯವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.
ಅಂದರೆ ಮೊದಲ ಪ್ರಶ್ನೆ ಪತ್ರಿಕೆ 10 ಗಂಟೆಗೆ ಆರಂಭವಾದರೆ, 8 ಗಂಟೆಯೊಳಗೆ ಅಭ್ಯರ್ಥಿಗಳು ಕೇಂದ್ರದೊಳಗೆ ಬರಬೇಕು.
ಬೆಳಗಿನ ಅವಧಿಗೆ 9.50 ಮತ್ತು ಮಧ್ಯಾಹ್ನ ನಡೆಯುವ ಎರಡನೇ ಪ್ರಶ್ನೆಪತ್ರಿಕೆಗೆ 1.50 ರ ನಂತರ ಬರುವ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ ಎಂದು ಆಯೋಗ ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದೆ.
ಬಿಗಿ ಭದ್ರತೆ :
ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ಮತ್ತಿತರ ಕಡೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಹಿಂದೆಂದಿಗಿಂತಲೂ ಬಿಗಿ ಭದ್ರತೆಯನ್ನು ತೆಗೆದುಕೊಳ್ಳಲಾಗಿದೆ. ಈ ಹಿಂದೆ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ನಡೆದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆಯೋಗ ಮುಂಚಿತವಾಗಿಯೇ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ಪರೀಕ್ಷಾ ಕೇಂದ್ರದ ಒಂದು ಕಿ.ಮೀ. ಸುತ್ತಮುತ್ತ 144 ಸೆಕ್ಷನ್ ಹಾಕಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಅನಗತ್ಯವಾಗಿ ತಿರುಗಾಟ ನಡೆಸುವುದು, ಅನುಮಾನಸ್ಪದವಾಗಿ ಓಡಾಡುವಂತಿಲ್ಲ. ಒಂದು ವೇಳೆ ಅನುಮಾನ ಕಂಡುಬಂದರೆ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲು ಅನುಮತಿ ನೀಡಲಾಗಿದೆ.
ಪರೀಕ್ಷಾ ಕೇಂದ್ರದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಮಂಗಳವಾರ ಯಾವುದೇ ಜೆರಾಕ್‌್ಸ ಅಂಗಡಿಗಳು ತೆರೆಯುವಂತಿಲ್ಲ ಎಂದು ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ತೆರೆದರೆ ತಕ್ಷಣವೇ ಮುಚ್ಚಬೇಕು. ಇಲ್ಲವೇ ಬಲವಂತವಾಗಿ ಮುಚ್ಚಿಸಬೇಕು ಜೊತೆಗೆ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.
ದಾಖಲೆಗಳು :
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅಗತ್ಯವಿರುವ ಪ್ರವೇಶಪತ್ರ, ಪಾಸ್ಪೋರ್ಟ್, ಪ್ಯಾನ್ಕಾರ್ಡ್, ಮತಚೀಟಿ, ಆಧಾರ್ಕಾರ್ಡ್, ಗುರುತಿನ ಚೀಟಿ, ಪಾಸ್ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು, ವಿಕಲ ಚೇತನ ವಿದ್ಯಾರ್ಥಿಗಳು ಪ್ರಮಾಣಪತ್ರ ತರಬೇಕು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಹಾಜರಾಗಿ ಪರೀಕ್ಷೆಯು ಸುಸೂತ್ರವಾಗಿ ನಡೆಯಲು ಸಹಕಾರ ನೀಡಬೇಕೆಂದು ಆಯೋಗ ಮನವಿ ಮಾಡಿದೆ.