ಬೆಂಗಳೂರು,ಆ.27- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ್ದನ್ನು ವಿರೋಧಿಸಿ ಶೋಷಿತ ಹಿಂದುಳಿದ ಸಂಘಟನೆಗಳ ಒಕ್ಕೂಟ ನಗರದಲ್ಲಿಂದು ರಾಜಭವನ ಚಲೋ ನಡೆಸಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೇಜೋವಧೆ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಎಸ್ ಪಕ್ಷಗಳು ಜನರಿಂದ ಚುನಾಯಿತವಾದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಕುತಂತ್ರ ಮಾಡುತ್ತಿವೆ ಎಂದು ಸಂಘಟನೆಗಳ ಮುಖಂಡರು ಆರೋಪಿಸಿದರು.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಬಿಜೆಪಿಯ ಹಾಗೂ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ದ ಬಾಕಿ ಇರುವ ಪ್ರಕರಣವನ್ನು ಕಡೆಗಣಿಸಲಾಗಿದೆ.
ಬಿಜೆಪಿಯ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರುಗಳ ವಿರುದ್ಧದ ಪ್ರಕರಣಗಳಲ್ಲಿ ತೀರ್ಮಾನ ತೆಗೆದುಕೊಳ್ಳಲು ವಿಳಂಬ ಮಾಡಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಕರಣದಲ್ಲಿ 10 ಗಂಟೆಗಳಲ್ಲೇ ಪ್ರಕ್ರಿಯೆಗಳು ಆರಂಭವಾಗಿದೆ.
ಇದು ದುರದ್ದೇಶಪೂರಿತ ಕ್ರಮ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಫ್ರೀಡಂಪಾರ್ಕ್‌ನಿಂದ ರಾಜಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪೊಲೀಸರು ಅರ್ಧ ದಾರಿಯಲ್ಲಿ ಪ್ರತಿಭಟನಾಕಾರರನ್ನು ತಡೆಹಿಡಿದರು.