ಬೆಂಗಳೂರು,ಆ.27- ನಿಯಮ ಉಲ್ಲಂಘಿಸಿ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತದ ಮೇಲೆ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಮೂಲಕ ಜಮೀನು ಪಡೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಂಗಳವಾರ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ದೂರು ನೀಡಿದ್ದಾರೆ.
ಸ್ವಜನ ಪಕ್ಷಪಾತ ಅಧಿಕಾರ ದುರುಪಯೋಗ ಮತ್ತು ಹಿತಾಸಕ್ತಿ ಸಂಘರ್ಷದ ಮೂಲಕ 5 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಪಡೆದಿರುವ ಪ್ರಿಯಾಂಕ ಖರ್ಗೆಯನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮುಖ್ಯಮಂತ್ರಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕೆಐಎಡಿಬಿಯಿಂದ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ಗಾಗಿ ಮೀಸಲಿಟ್ಟ 45.9 ಎಕರೆ ಜಮೀನಿನಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ 5 ಎಕರೆ ಜಮೀನು ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಡೆಸುತ್ತಿರುವ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಪರಿಶಿಷ್ಟ ಕೋಟಾದಡಿ 5 ಎಕರೆ ಜಮೀನು ನೀಡಲಾಗಿದೆ. ಈ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆ, ರಾಹುಲ್ ಖರ್ಗೆ, ಸಂಸದ ಹಾಗೂ ಅಳಿಯ ರಾಧಾಕೃಷ್ಣ ಅವರುಗಳು ಸದಸ್ಯರಾಗಿದ್ದಾರೆ. ಇದು ನಿಯಮ ಉಲ್ಲಂಘನೆಯಾಗಿದೆ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದಾರೆ.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಜಮೀನು ನೀಡಿರುವುದನ್ನು ಸಮರ್ಥಿಸಿಕೊಂಡಿದ್ದು, ರಾಹುಲ್ ಖರ್ಗೆ ಜಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿರುವುದು ಅಧಿಕಾರ ದುರುಪಯೋಗ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಬಿಜೆಪಿಯ ಐಟಿ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ ಮಾಡಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ಆರೋಪ ಬಂದ ಬೆನ್ನಲ್ಲೇ ಸಚಿವ ಪ್ರಿಯಾಂಕ ಖರ್ಗೆ ಸಹೋದರನಿಗೆ ಕಾನೂನು ಬಾಹಿರವಾಗಿ ಜಮೀನು ನೀಡಿದ್ದಾರೆ.
2024ರ ಮಾರ್ಚ್‌ನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಈ ಹಂಚಿಕೆಗೆ ಹೇಗೆ ಸಮತಿ ಸೂಚಿಸಿದರು? ಖರ್ಗೆ ಕುಟುಂಬ ಕೆಐಎಡಿಬಿ ಭೂಮಿಗೆ ಅರ್ಹತೆ ಪಡೆಯಲು ಯಾವಾಗ ಏರೋಸ್ಪೇಸ್ ಉದ್ಯಮಿಯಾದರು? ಈ ಅಕ್ರಮ ಹಂಚಿಕೆಯ ವಿಷಯವು ರಾಜ್ಯಪಾಲರ ಕಚೇರಿಗೆ ತಲುಪಿದೆ ಎಂದು ಪ್ರಶ್ನಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಭಾಯಿ ಖರ್ಗೆ ಕೂಡ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ನ ಸದಸ್ಯರಾಗಿರುವುದು ದಾಖಲೆಗಳಿಂದ ಸಾಬೀತಾಗಿದೆ ಎಂದಿದ್ದಾರೆ.