ಹುಬ್ಬಳ್ಳಿ,ಜ.10- ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವಿವಸ್ತ್ರ ಹಾಗೂ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಸರ್ಕಾರ ಸಿಐಡಿಗೆ ವಹಿಸಿದ ಹಿನ್ನಲೆಯಲ್ಲಿ ಸಿಐಡಿ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿದೆ.
ಐಪಿಎಸ್ ಅಧಿಕಾರಿ ಶಲ್ಲೋ, ಡಿವೈಎಸ್‌ಪಿ ಸಂತೋಷ್ ಹಾಗೂ ಇನ್ನಿತರ ಅಧಿಕಾರಿಗಳ ನೇತೃತ್ವದ ಸಿಐಡಿ ತಂಡಕ್ಕೆ ಪ್ರಕರಣಗಳ ಕಡತಗಳನ್ನು ಹಸ್ತಾಂತರ ಮಾಡಲಾಗಿದೆ. ಜ. 2 ರಿಂದ ಇಲ್ಲಿಯವರೆಗೂ ಇದೇ ಘಟನೆಗೆ ಸಂಬಂಧಿಸಿದಂತೆ 6 ಎಫ್‌ಐಆರ್ ದಾಖಲಾಗಿದ್ದು, ಎಫ್‌ಐಆರ್‌ಗಳ ಕಡತಗಳನ್ನು ಸಂಗ್ರಹಿಸಿರುವ ಸಿಐಡಿ ಅಧಿಕಾರಿಗಳು ತನಿಖೆ ಮಾಡಲಿದ್ದಾರೆ.
ಈ ತಂಡ ಕೇಶವಪುರ ಪೊಲೀಸ್ ಠಾಣೆಗೆ ಮೊದಲು ಭೇಟಿ ನೀಡಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದೆ. ನಂತರ ಪೊಲೀಸ್ ಆಯುಕ್ತರ ಕಚೇರಿಗೂ ಭೇಟಿ ನೀಡಿ ಅಧಿಕಾರಿಗಳ ಜೊತೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಿಜೆಪಿ ವಿರೋಧ: ಸುಜತಾ ಹಂಡಿ ವಿವಸ್ತ್ರ ಪ್ರಕರಣವನ್ನ ರಾಜ್ಯ ಸರ್ಕಾರ ಸಿಐಡಿಗೆ ನೀಡಿರುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ತನ್ನ ನಿರ್ಧಾರದಂತೆ ತನಿಖೆಗೆ ಮುಂದಾಗಿದೆ.
