ಬೆಂಗಳೂರು,ಜ.10-ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮದುವೆಯಾದ ವ್ಯಕ್ತಿ ಮಗುವಾದ ಬಳಿಕ ಚಿನ್ನಾಭರಣ ಸೇರಿದಂತೆ 36 ಲಕ್ಷ ರೂ. ಹಣ ಪಡೆದುಕೊಂಡು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತಿಗೆ ಅನಾರೋಗ್ಯ ಸಮಸ್ಯೆ ಇದ್ದುದ್ದರಿಂದ 2021 ರಲ್ಲಿ ಮಹಿಳೆ ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದಾಳೆ.
ತದ ನಂತರದಲ್ಲಿ 10 ವರ್ಷಗಳಿಂದ ಪರಿಚಯವಿದ್ದ ಮೋಹನ್‌ರಾಜ್ ಎಂಬಾತ ಈ ಮಹಿಳೆಗೆ ಬಾಳು ಕೊಡುವುದಾಗಿ ಆಕೆಯ ವಿಶ್ವಾಸ ಗಳಿಸಿ 2022 ರಲ್ಲಿ ಮದುವೆಯೂ ಆಗಿದ್ದಾನೆ. 2023 ರಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮೋಹನ್‌ರಾಜ್‌ನನ್ನು ನಂಬಿದ್ದ ಮಹಿಳೆ ಆತ ಕೇಳಿದಾಗಲೆಲ್ಲಾ ಹಣ ಕೊಟ್ಟಿದ್ದಾರೆ.
ಆರೋಪಿ ಮೋಹನ್‌ರಾಜ್ ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ ಎಂದು ನಂಬಿಸಿ ಮತ್ತಷ್ಟು ಹಣ ಪಡೆದಿದ್ದಾನೆ. ತದ ನಂತರದಲ್ಲಿ ಚಿನ್ನಾಭರಣ ಅಡವಿಟ್ಟು 36 ಲಕ್ಷ ರೂ. ಸಾಲ ಪಡೆದು ಆತನಿಗೆ ಮಹಿಳೆ ನೀಡಿದ್ದಾರೆ.
ಈ ನಡುವೆ2025 ರಲ್ಲಿ ಏಕಾಏಕಿ ಮನೆಬಿಟ್ಟು ಹೋದ ಮೋಹನ್‌ರಾಜ್ ಇದುವರೆಗೂ ಪತ್ತೆಯಾಗಿಲ್ಲ. ಇತ್ತ ಸಾಲ ಮಾಡಿದ್ದ ಹಣವೂ ಇಲ್ಲ. ಪತಿಯೂ ಇಲ್ಲ. ತಾನು ಮೋಸ ಹೋಗಿರುವುದಾಗಿ ಅರಿತ ಮಹಿಳೆ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬನಶಂಕರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
