ಬೆಂಗಳೂರು,ಆ.30- ಅಧಿಕಾರಿಗಳಿಂದ ನಕ್ಷೆ ಪಡೆಯಲು ಬಿಬಿಎಂಪಿ ಕಚೇರಿಗಳಿಗೆ ಅಲೆದು ಅಲೆದು ಸಾಕಾಗಿದೆಯೇ? ಇನ್ನು ಮುಂದೆ ಅಂತಹ ಸಮಸ್ಯೆ ಜನರನ್ನು ಕಾಡುವುದಿಲ್ಲ. ಏಕೆ ಅಂತೀರಾ ಇನ್ನೇನು ಕೆಲವೇ ದಿನಗಳಲ್ಲಿ ಹದಿನೈದು ದಿನಗಳಲ್ಲಿ ನಕ್ಷೆ ನೀಡುವ ನಂಬಿಕೆ ಸಾಫ್ಟ್‌ವೇರ್ ಅಳವಡಿಸಲು ಬಿಬಿಎಂಪಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಈಗಾಗಲೇ ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಲಯದಲ್ಲಿ ಅಳವಡಿಸಲಾಗಿದ್ದ ನಂಬಿಕೆ ನಕ್ಷೆ ಸಾಫ್ಟ್‌ವೇರ್ ಯಶಸ್ವಿಯಾಗಿರುವುದರಿಂದ ಸೆ.2 ರಿಂದ ಈ ಯೋಜನೆಯನ್ನು ನಗರದ ಎಲ್ಲ ಎಂಟು ವಲಯಗಳಿಗೂ ವಿಸ್ತರಿಸಲಾಗುತ್ತಿದೆ.
ನಿಮ ಮನೆ ನಕ್ಷೆ ನಿಮ ಮನೆಬಾಗಿಲಿಗೆ ಎಂಬ ಘೋಷವಾಕ್ಯದೊಂದಿಗೆ ಈ ಮಹತ್ವದ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಈ ಯೋಜನೆ ಜಾರಿಯಾದರೆ ನಾಲ್ಕು ಸಾವಿರ ಅಡಿವರೆಗಿನ ನಿವೇಶನದ ಮನೆಗಳಿಗೆ ಇನುಂದೆ ನಕ್ಷೆ ಪಡೆಯೋದು ಸಲೀಸಾಗಲಿದೆ.
ಏನದು? ಹೇಗೆ ಕಾರ್ಯ ನಿರ್ವಹಿಸಲಿದೆ? ಬಿಬಿಎಂಪಿಯಿಂದ ಅನುಮತಿ ಪಡೆದ ಆರ್ಕಿಟೆಕ್ಟ್‌ಗಳು ಅಥವಾ ಇಂಜಿನಿಯರುಗಳು, ಮಾಲೀಕರು ನೀಡಿದ ದಾಖಲೆ ಮತ್ತು ಕಟ್ಟಡ ನಕ್ಷೆಯನ್ನ ಬಿಬಿಎಂಪಿ ವೆಬ್ ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು.
ಅಪ್ಲೋಡ್ ಆದ ದಾಖಲೆಗಳನ್ನು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರವು ಆನ್ಲೈನ್ ನಲ್ಲೇ ಕಟ್ಟಡವು ಕೆರೆ, ರಾಜಕಾಲುವೆ ಮತ್ತಿತರ ಬಫರ್ ಝೋನ್ ನಲ್ಲಿ ಬರುವುದೇ ಎಂದು ಪರಿಶೀಲಿಸಿ ಆಟೋ ಡಿಸಿಆರ್ ಮೂಲಕ ಎರಡು ದಿನದಲ್ಲಿ ತಾತ್ಕಾಲಿಕ ನಕ್ಷೆಗೆ ನೀಡಲಿದೆ.
ಕಂದಾಯ ಅಧಿಕಾರಿಗಳು, ನಗರ ಯೋಜನೆ ಅಧಿಕಾರಿಗಳು ತಾತ್ಕಾಲಿಕ ನಕ್ಷೆ ಪರಿಶೀಲಿಸಿ ಸರಿ ಇದ್ದರೆ ಕಾಯಂ ನಕ್ಷೆಯಾಗಿ ಮಂಜೂರು ಮಾಡುತ್ತಾರೆ. ತಪ್ಪಾಗಿದ್ದರೆ ತಿದ್ದುತ್ತಾರೆ. ಬಫರ್ ಝೋನ್ ನಲ್ಲಿ ಬರುತ್ತಿದ್ದರೆ ಕಟ್ಟಡ ಕಟ್ಡದಂತೆ ನಿರ್ಬಂಧ ಹೇರುತ್ತಾರೆ. ಈ ಎಲ್ಲ ಕಾರ್ಯವೂ ಕೇವಲ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.