Friday, September 20, 2024
Homeರಾಜ್ಯBIG NEWS : ಸಿಎಂ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ರಾಷ್ಟ್ರಪತಿ ಎಂಟ್ರಿ

BIG NEWS : ಸಿಎಂ ಸಿದ್ದರಾಮಯ್ಯನವರ ಮುಡಾ ಹಗರಣದಲ್ಲಿ ರಾಷ್ಟ್ರಪತಿ ಎಂಟ್ರಿ

Presidential entry in CM Siddaramaiah's Muda scam

ಬೆಂಗಳೂರು,ಆ.31- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಅಭಿಯೋಜನೆ ಹಾಗೂ ತನಿಖೆಗೆ ಪೂರ್ವಾನುಮತಿ ನೀಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ದೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ಪಂದಿಸಿದ್ದು ಸೂಕ್ತ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದಾರೆ.

ಮುಡಾ ಪ್ರಕರಣದಲ್ಲಿ ಟಿ.ಜೆ.ಅಬ್ರಹಾಂ, ಪ್ರದೀಪ್‌ ಕುಮಾರ್‌, ಸ್ನೇಹಮಯಿ ಕೃಷ್ಣ ಅವರುಗಳು ನೀಡಿದ್ದ ದೂರನ್ನು ಪರಿಗಣಿಸಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆ ಹಾಗೂ ತನಿಖೆಗೆ ಪೂರ್ವಾನುಮತಿ ನೀಡಿದ್ದಾರೆ.

ಇದನ್ನು ವಿರೋಧಿಸಿ ರಾಜ್ಯಪಾಲರ ವಿರುದ್ಧ ಆ.19 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆಗಳು ನಡೆದಿದ್ದವು. ಅಂದು ಕಾಂಗ್ರೆಸ್‌‍ ಪಕ್ಷದ ಮಾಧ್ಯಮ ಮತ್ತು ಸಂವಹನ ಘಟಕದ ಅಧ್ಯಕ್ಷ ರಮೇಶ್‌ಬಾಬು ರಾಷ್ಟ್ರಪತಿಯವರಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ರಾಷ್ಟ್ರಪತಿಯವರ ಅಧೀನ ಕಾರ್ಯದರ್ಶಿ ಪಿ.ಸಿ.ಮೀನಾ ಅವರು ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ದೂರನ್ನು ರವಾನಿಸಿದ್ದು, ರಾಷ್ಟ್ರಪತಿಯವರಿಗೆ ಸಲ್ಲಿಕೆಯಾಗಿರುವ ಈ ಅರ್ಜಿಯ ಮೇಲೆ ಕ್ರಮ ತೆಗೆದುಕೊಂಡು ಅರ್ಜಿದಾರರಿಗೆ ನೇರವಾಗಿ ಮಾಹಿತಿ ನೀಡಿ ಎಂದು ಸೂಚನೆ ನೀಡಿದ್ದಾರೆ.

ರಮೇಶ್‌ಬಾಬು ತಮ ದೂರಿನಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರ ಕ್ರಮವನ್ನು ಅಸಂವಿಧಾನಿಕ ಎಂದು ವಿವರಿಸಿದರು. ಜನರಿಂದ ಚುನಾಯಿತವಾಗಿರುವ ರಾಜ್ಯದ ಕಾಂಗ್ರೆಸ್‌‍ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುನ್ನಡೆಸುತ್ತಿದ್ದಾರೆ. ಹಲವಾರು ಜನಪರವಾದ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ರವರು ರಾಜಕೀಯ ಪ್ರೇರಿತವಾಗಿ ಪ್ರಜಾಸತ್ತಾತಕ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಿ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಇದು ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವಾಗಿದ್ದು, ಜನಾದೇಶವನ್ನು ಅಪಮಾನ ಮಾಡಿದಂತೆ ಎಂದು ದೂರಿದರು.

ಪ್ರಮುಖ ಅಂಶಗಳ ಪೈಕಿ ರಾಜ್ಯಪಾಲರ ನಿರ್ಧಾರ ಕೇಂದ್ರ ಸರ್ಕಾರದ ರಾಜಕೀಯ ಹಿತಾಸಕ್ತಿಯಿಂದ ಪ್ರಭಾವಿತವಾಗಿದೆ. ಎನ್‌ಡಿಎ ಮಿತ್ರಪಕ್ಷಗಳಾಗಿರುವ ಜೆಡಿಎಸ್‌‍ ಮತ್ತು ಬಿಜೆಪಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜಕೀಯ ದ್ವೇಷಕ್ಕಾಗಿ ಜನಪರವಾದ ಯೋಜನೆಗಳಿಗೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಸೆಕ್ಷನ್‌ 17ಎ ಪ್ರಕಾರ ಅಭಿಯೋಜನೆಗೆ ಅನುಮತಿ ನೀಡಬೇಕಾದರೆ ಅನುಸರಿಸಬೇಕಾದ ಪ್ರಮಾಣಿತ ಕಾರ್ಯನಿರ್ವಹಣಾ ಪ್ರಕ್ರಿಯೆ(ಎಸ್‌‍ಓಪಿ)ಯನ್ನು ಕೇಂದ್ರ ಸರ್ಕಾರ ನಿರ್ಣಯಿಸಿದೆ. ಅದನ್ನು ಸಿದ್ದರಾಮಯ್ಯ ಅವರ ಪ್ರಕರಣದಲ್ಲಿ ರಾಜ್ಯಪಾಲರು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ರಾಜ್ಯಪಾಲರಿಗೆ ಸಲ್ಲಿಕೆಯಾಗಿದ್ದ ದೂರುಗಳಿಗೆ ಸವಿಸ್ತಾರವಾದ ವಿವರಣೆಗಳನ್ನು ಹಾಗೂ ಸ್ಪಷ್ಟನೆಗಳನ್ನು ನೀಡಲಾಗಿತ್ತು. ಅದರ ಹೊರತಾಗಿಯೂ ರಾಜ್ಯಪಾಲರು ಶೋಕಾಸ್‌‍ ನೋಟಿಸ್‌‍ ನೀಡಿದ್ದರು. ನಂತರ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಇದು ಸಂವಿಧಾನದ ಬಾಧ್ಯತೆಯನ್ನು ಉಲ್ಲಂಘಿಸಿದಂತಾಗಿದ್ದು, ರಾಜ್ಯಪಾಲರ ನಿಸ್ಪಕ್ಷಪಾತ ನಡವಳಿಕೆಗೆ ಅಪಚಾರವಾಗಿದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿಯವರ ವಿರುದ್ಧ ದೂರುಗಳು ಆಧಾರರಹಿತ ಎಂದು ರಾಜ್ಯಪಾಲರಿಗೆ ಮನವರಿಕೆಯಾಗಿದ್ದರೂ ಕೂಡ ರಾಜಕೀಯ ಆಧಾರಿತ ದ್ವೇಷದ ಪ್ರಭಾವದಿಂದ ಪೂರ್ವಾನುಮತಿ ನೀಡಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಇತರೆ ರಾಜಕೀಯ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ, ಮುರುಗೇಶ್‌ನಿರಾಣಿ, ಶಶಿಕಲಾ ಜೊಲ್ಲೆ, ಅವರ ವಿರುದ್ಧ ತನಿಖೆ ನಡೆದು ಅಭಿಯೋಜನೆಗೆ ಪೂರ್ವಾನುಮತಿ ಕೇಳಿದ್ದರೂ ರಾಜ್ಯಪಾಲರು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಕಾಂಗ್ರೆಸ್‌‍ ಪಕ್ಷಕ್ಕೆ ಜನ ಮತ ಹಾಕಿರುವುದನ್ನು ಮತ್ತೆ ಅದರ ನಂತರ ರಚನೆಯಾದ ಸರ್ಕಾರ ಜಾರಿಗೊಳಿಸಿದ ಪಂಚಖಾತ್ರಿ ಯೋಜನೆಗಳನ್ನು ಬಿಜೆಪಿಯಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಅನ್ಯಮಾರ್ಗದ ಮೂಲಕ ಪ್ರಜಾಪ್ರಭುತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಲಾಗಿದೆ. ಈ ಹಿಂದೆ ಉತ್ತರಕಾಂಡ್‌, ದೆಹಲಿ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗಿತ್ತು ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀಡಲಾಗಿರುವ ಅಭಿಯೋಜನೆ ಪೂರ್ವಾನುಮತಿಯನ್ನು ಹಿಂಪಡೆಯಬೇಕು. ರಾಜಭವನವನ್ನು ಸಾಂವಿಧಾನಿಕ ಹಾಗೂ ನಿಸ್ಪಕ್ಷಪಾತವಾಗಿ ವರ್ತಿಸುವ ಕಚೇರಿಯನ್ನಾಗಿ ಖಾತ್ರಿ ಪಡಿಸಬೇಕು. ಒಕ್ಕೂಟ ವ್ಯವಸ್ಥೆ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ರಚಿಸಬೇಕು. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ಕಡಿವಾಣ ಹಾಕಬೇಕು ಎಂದು ರಮೇಶ್‌ಬಾಬು ದೂರಿನಲ್ಲಿ ವಿವರಿಸಿದರು.

ಈ ದೂರನ್ನು ರಾಷ್ಟ್ರಪತಿಯವರು ಮುಖ್ಯ ಕಾರ್ಯದರ್ಶಿಯವರಿಗೆ ಕಳುಹಿಸಿಕೊಟ್ಟಿದ್ದು, ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

RELATED ARTICLES

Latest News