ಬೆಂಗಳೂರು, ಸೆ.1– ರಾಜಮನೆತನದ ವಿರೋಧ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಮೈಸೂರಿನಲ್ಲಿ ಶ್ರೀ ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲು ಮುಂದಾಗಿರುವುದು ಕುತೂಹಲ ಕೆರಳಿಸಿದೆ. ಈ ನಡುವೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ದಿಶಾ ಸಭೆ ರದ್ದುಗೊಂಡಿರುವುದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಇತ್ತ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣದ ಕುರಿತಂತೆ ವಾದವಿವಾದಗಳು ತೀವ್ರಗೊಂಡಿದ್ದು, ನಾಳೆ ಹೈಕೋರ್ಟ್‌ನಲ್ಲಿ ಮಹತ್ವದ ವಿಚಾರಣೆಯಾಗಲಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದು, ಬೆಳಗ್ಗೆ ಚಾಮುಂಡಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.
ಬಳಿಕ ಬೆಟ್ಟದಲ್ಲೇ ಇರುವ ದಾಸೋಹ ಭವನದಲ್ಲಿ ಚಾಮುಂಡಿ ಕ್ಷೇತ್ರದ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಇದು ರಾಜಕೀಯವಾಗಿ ಇದು ಚರ್ಚೆಗೆ ಗ್ರಾಸವಾಗಿದೆ. ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮೈಸೂರಿನ ರಾಜ ಮನೆತನ ವಿರೋಧಿಸಿತ್ತು. ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದಷ್ಟೇ ಅಲ್ಲದೇ ನ್ಯಾಯಾಲಯದಲ್ಲೂ ಪ್ರಶ್ನಿಸಲಾಗಿದೆ.
ಪ್ರಾಧಿಕಾರ ರಚನೆಗಾಗಿ ವಿಧಾನ ಮಂಡಲದಲ್ಲಿ ಅಂಗೀಕಾರ ಪಡೆಯಲಾಗಿರುವ ಮಸೂದೆ ಆಧರಿತವಾಗಿ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಬಾರದೆಂದು ನ್ಯಾಯಾಲಯದ ನಿರ್ದೇಶನ ಇದೆ. ಚಾಮುಂಡಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರ ಮೊದಲಿನಿಂದಲೂ ಅಸ್ತಿತ್ವದಲ್ಲಿದ್ದು, ಸಿದ್ದರಾಮಯ್ಯ ಈ ಮೊದಲಿನ ಪ್ರಾಧಿಕಾರದ ಪ್ರಮುಖರ ಜೊತೆ ನಾಳೆ ಚರ್ಚೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ರಾಜಕೀಯವಾಗಿ ವಿರೋಧ ಪಕ್ಷಗಳ ಜೊತೆ ಮುಖಾಮುಖಿಯಾಗಿದ್ದು, ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರಲ್ಲಿ ತವರು ಜಿಲ್ಲೆ ಮೈಸೂರಿನಲ್ಲಿ ಚಾಮುಂಡಿ ಅಭಿವೃದ್ಧಿ ಪ್ರಾಧಿಕಾರ ಸಭೆ ನಡೆಸಿ, ತಮ ಸರ್ಕಾರ ನಿಲುವನ್ನು ಸಮರ್ಥಿಸಿಕೊಳ್ಳಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ಇದೇ ವೇಳೆ ಮತ್ತೊಂದು ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಬೇಕಿದ್ದ ದಿಶಾ ಸಭೆ ರದ್ದುಗೊಂಡಿದೆ.
ಕೇಂದ್ರ ಸಚಿವರು ಹಾಗೂ ಸಂಸದರಿಗೆ ಡೆವಲಪ್‌ಮೆಂಟ್ ಕೋಆರ್ಡಿನೇಷನ್‌ಅಂಡ್ ಮಾನಿಟರಿಂಗ್ ಕಮಿಟಿ (ದಿಶಾ) ಸಭೆಗಳನ್ನು ನಡೆಸಲು ಅವಕಾಶ ಇದೆ. ಕೇಂದ್ರ ಸಚಿವರಾದ ಕುಮಾರ ಸ್ವಾಮಿ ಹಾಗೂ ಮೈಸೂರಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಾಳೆ ಮೈಸೂರಿನಲ್ಲಿ ದಿಶಾ ಸಭೆಗಳನ್ನು ನಡೆಸಬೇಕಿತ್ತು.
ಮುಖ್ಯಮಂತ್ರಿ ಸಿದ್ದರಾಮಯಯ್ಯ ಅವರು, ಜಿಲ್ಲೆಗೆ ಭೇಟಿ ನೀಡುತ್ತಿರುವುದರಿಂದಾಗಿ ದಿಶಾ ಸಭೆಗಳನ್ನು ರದ್ದುಗೊಳಿಸಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮತ್ತೊಂದು ರೀತಿಯ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ಅವರು ಈ ಮೊದಲು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳ ಸಭೆ ಕರೆದಾಗ ಅದರಲ್ಲಿ ಅಧಿಕಾರಿಗಳು ಭಾಗವಹಿಸದಂತೆ ರಾಜ್ಯ ಸರ್ಕಾರ ತಡೆ ಹಿಡಿದಿತ್ತು ಎಂಬ ಆರೋಪಗಳಿವೆ. ಈಗ ಕೇಂದ್ರ ಸಚಿವರಿಗೆ ಮತ್ತು ಸಂಸದರಿಗೆ ಪ್ರದತ್ತವಾಗಿರುವ ದಿಶಾ ಸಭೆ ನಡೆಸಲು ಸಿದ್ದರಾಮಯ್ಯ ಅವರ ಪ್ರವಾಸ ಅಡ್ಡಿಯಾಗಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಿದೆ.