ಹಾಸನ,ಸೆ.2– ಕಳೆದ ಕೆಲ ತಿಂಗಳ ನಂತರ ಕಾಡಾನೆ ಭೀಮ ಮತ್ತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಆಲೂರು ತಾಲ್ಲೂಕಿನ ಆಚಗೋಡನಹಳ್ಳಿ ಬಳಿ ಬೀಡುಬಿಟ್ಟಿರುವ ಭೀಮ ರೈತರ ಜಮೀನುಗಳಿಗೆ ನುಗ್ಗಿ ಮನಬಂದಂತೆ ಬೆಳೆಗಳನ್ನು ತಿಂದು, ತುಳಿದು ನಾಶ ಮಾಡಿದೆ.
ಹಗಲು ವೇಳೆಯಲ್ಲೇ ಜಮೀನುಗಳಿಗೆ ನುಗ್ಗಿ ಆನೆ ನಡೆದದ್ದೇ ದಾರಿ ಎಂಬಂತೆ ಮೆಕ್ಕೆ, ಜೋಳ, ಕಾಫಿ, ಬಾಳೆ, ಅಡಿಕೆ ಬೆಳೆಗಳನ್ನು ನಾಶ ಮಾಡುತ್ತಿರುವ ಒಂಟಿ ಸಲಗ ಜನನಿಬಿಡ ಪ್ರದೇಶಗಳಿಗೂ ದಾಂಗುಡಿ ಇಡುತ್ತಿದೆ.
ಒಂಟಿ ಸಲಗದ ದಾಳಿಯಿಂದ ಹತ್ತಾರು ಎಕರೆ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಜಮೀನುಗಳಿಗೆ ತೆರಳಲು ರೈತರು ಹಿಂದೇಟು ಹಾಕುವಂತಾಗಿದೆ. ಜೊತೆಗೆ ಕೂಲಿ ಕಾರ್ಮಿಕರು ಸಹ ಕೆಲಸಗಳಿಗೆ ಬಾರದಂತಹ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದು, ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಕಾಡಿಗೆ ಹಿಮೆಟ್ಟಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.