ಯಾದಗಿರಿ/ಬೆಳಗಾವಿ,ಸೆ.2- ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಭಾರಿ ಮಳೆಗೆ ಜಿಲ್ಲೆಯ ಗುರುಮಟ್ಕಲ್ ತಾಲ್ಲೂಕಿನ ನಂದೆಪಲ್ಲಿ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಜಿಲ್ಲೆಯಲ್ಲಿ ಕೆಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ನಂದೆಪಲ್ಲಿ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ಪರದಾಡುವಂತಾಗಿದೆ.
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮೋಟನಹಳ್ಳಿ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ.
ಅದೇ ರೀತಿ ಹುಬ್ಬಳ್ಳಿಯಲ್ಲೂ ಭಾರಿ ಮಳೆಯಾಗುತ್ತಿದ್ದು, ಕಮಲಾವತಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವು ಗ್ರಾಮಗಳು ಜಲದಿಗ್ಬಂಧನವಾಗಿವೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯ ಬೆನಕನಹಳ್ಳಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಮಿರಿಯಾಣ ಸೇತುವೆ ಮುಳುಗಡೆಯಾಗಿದೆ.
ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಮೂರ್ನಾಲ್ಕು ದಿನಗಳಿಂದ ಅಬ್ಬರಿಸುತ್ತಿದ್ದು, ಅಕ್ಷರಸಹ ಜನರು ಪರದಾಡುವಂತಾಗಿದೆ. ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿವೆ.
ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ.
ಮಲಪ್ರಭಾ, ಘಟಪ್ರಭಾ ನದಿ ಮತ್ತೆ ಉಕ್ಕಿ ಹರಿಯತೊಡಗಿದೆ. ಕಾಗಿಣ ನದಿ ಪ್ರವಾಹದಿಂದ ಸೇಡಂ ತಾಲ್ಲೂಕಿನ ಹಳೆಯ ಸೇತುವೆ ಮುಳುಗಡೆಯಾಗಿದೆ. ಉತ್ತರ ಕರ್ನಾಟಕ ಭಾಗದ ಹಲವು ಜಲಾಶಯಗಳು ಭರ್ತಿಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಪಾರ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ನದಿಪಾತ್ರದ ಜನ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.
ಕಾಳಗಿಯ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ, ಮುಳಕೇಡದ ಉತ್ತರಾದಿಮಠ, ಜಯತೀರ್ಥ ಮೂಲ ವೃಂದಾವನ, ಸಂಗಮೇಶ್ವರ ದೇವಾಲಯ ಜಲಾವೃತಗೊಂಡಿವೆ.
ಕಲಬುರಗಿಯ ಕಿರು ಮೃಗಾಲಯಕ್ಕೆ ನೀರು ನುಗ್ಗಿ ಮೃಗಾಲಯದಲ್ಲಿರುವ ಪ್ರಾಣಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಕೊಪ್ಪಳದಲ್ಲೂ ಭಾರಿ ಮಳೆಯಾಗಿದೆ. ಅಬ್ಬರದ ಮಳೆ-ಗಾಳಿಗೆ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಬೆಳಗಾವಿ, ಗದಗ ಜಿಲ್ಲೆಯಲ್ಲೂ ಕೂಡ ಮಳೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಒಟ್ಟಾರೆ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ಕಳೆದೆರಡು ದಿನಗಳಿಂದ ಮತ್ತೆ ಅಬ್ಬರಿಸತೊಡಗಿದ್ದು, ಉತ್ತರ ಕರ್ನಾಟಕದ ಜನ ತತ್ತರಿಸತೊಡಗಿದ್ದಾರೆ.