ಬೆಂಗಳೂರು,ಸೆ.2- ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ನಿಷೇಧ ಮಾಡಲಾಗಿರುವುದರಿಂದ ಯಾರೇ ಆಗಲಿ ಪಿಓಪಿ ಗಣೇಶ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತೊಮೆ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಸಾಯನಿಕ ಹಾಗೂ ಥರ್ಮಾಕೋಲ್ ನಿಂದ ಪರಿಸರಕ್ಕೆ ಹಾನಿ ಹಿನ್ನೆಲೆಯಲ್ಲಿ ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಕೆ ನಿಷೇಧಿಸಲಾಗಿದೆ. ಹೀಗಾಗಿ ಯಾರು ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 2015ರಲ್ಲೇ ಪಿಓಪಿ ಗಣೇಶಗಳನ್ನು ಬ್ಯಾನ್ ಮಾಡಲಾಗಿದ್ದರೂ ಕೆಲವು ಪ್ರದೇಶಗಳಲ್ಲಿ ಪಿಓಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಕೂಡ ಪಿಓಪಿ ಗಣೇಶ ಮೂರ್ತಿಗಳನ್ನು ಖರೀದಿಸುವ ಬದಲು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಎಲ್ಲೇ ಪಿಓಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹೀಗಾಗಿ ನಗರದ ಪ್ರತಿ ವಲಯಕ್ಕೆ ಒಬ್ಬೊಬ್ಬರು ನೂಡಲ್ ಅಧಿಕಾರಿ ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿಯ 63 ಉಪ ಕಂದಾಯ ವಿಭಾಗಗಳ ಏಕಗವಾಕ್ಷಿ ಕೇಂದ್ರಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗುವುದು. ಪೊಲೀಸ್, ಬಿಬಿಎಂಪಿ, ಬೆಸ್ಕಾಂ, ಅಗ್ನಿ ಶಾಮಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಅಭಿಪ್ರಾಯ ಪಡೆದು ತ್ವರಿತವಾಗಿ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಪಿಓಪಿ ಗಣೇಶ ಮಾರಾಟ ಕಂಡು ಬಂದಲ್ಲಿ ಅಗ್ನಿ ಶಾಮಕ ಹಾಗೂ ಬೆಸ್ಕಾಂನ ನೋಡಲ್ ಅಧಿಕಾರಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ವಶಕ್ಕೆ ಪಡೆದು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಹಾಗೂ ವಶಕ್ಕೆ ಪಡೆದ ವಸ್ತುಗಳನ್ನು ನಿಯಮಾ ನುಸಾರ ವಿಲೇವಾರಿ ಮಾಡುವಂತೆ ಸೂಚಿಸಲಾಗಿದೆ.
ಇದೇ ಸಂದರ್ಭದಲ್ಲಿ ಅವರು ಗಣೇಶಮೂರ್ತಿಗಳ ವಿಸರ್ಜನೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.