ಬೆಂಗಳೂರು,ಅ.23-ರಾಜ್ಯದ ರಾಜಕಾರಣದಲ್ಲಿ ಸಣ್ಣದಾಗಿ ಹೊಗೆಯಾಡಲಾರಂಭಿಸಿರುವ ಬೆಳಗಾವಿಯ ಬೆಂಕಿ ರಾಜಕಾರಣವನ್ನು ಆರಂಭದಲ್ಲೇ ತಣಿಸಲು ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕೆಂದು ಕಾಂಗ್ರೆಸಿಗರು ಒತ್ತಾಯಿಸಿದ್ದಾರೆ. ಕಳೆದ ಒಂದು ವಾರದಿಂದೀಚೆಗೆ ಹೊಗೆಯಾಡುತ್ತಿರುವ ಬೆಳಗಾವಿಯ ಬೇಗುದಿ ರಾಜ್ಯಾದ್ಯಂತ ವ್ಯಾಪಿಸಿ ಸಮಸ್ಯೆ ಸೃಷ್ಟಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ಜಿಲ್ಲಾ ರಾಜಕಾರಣದಲ್ಲಿ ಗೊಂದಲ ಸೃಷ್ಟಿಸುತ್ತಿರುವವರಿಗೆ ಕಡಿವಾಣ ಹಾಕಬೇಕೆಂದು ಹಲವು ನಾಯಕರು ಹೈಕಮಾಂಡ್‍ಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿಯಲ್ಲಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ನಡುವೆ ಅಸಮಾಧಾನಗಳು ತಲೆ ಎತ್ತಿವೆ. ಪಿಎಲ್‍ಡಿ ಬ್ಯಾಂಕ್ ಚುನಾವಣೆಯಿಂದ ಆರಂಭಗೊಂಡು ಅಧಿಕಾರಿಗಳ ವರ್ಗಾವಣೆ, ವಿವಿಧ ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಹಲವು ವಿಚಾರಣೆಗಳಿಗೆ ಪರಸ್ಪರ ಅಸಹಕಾರಗಳು ಕಂಡುಬಂದಿವೆ.
ಇಬ್ಬರು ತಮ್ಮ ಮೌನ ದೌರ್ಬಲ್ಯವಲ್ಲ ಎಂಬ ಸಂದೇಶದ ಮೂಲಕ ಸಂಘರ್ಷದ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ. ಇದಕ್ಕೆ ತುಪ್ಪ ಸುರಿಯುವಂತೆ ಕೆ.ಎನ್.ರಾಜಣ್ಣ, ಬಸವರಾಜರಾಯರೆಡ್ಡಿ, ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರು ಒಡಕಿನ ಧ್ವನಿಯೆತ್ತಿದ್ದಾರೆ.
ವಿಶ್ವವಿಖ್ಯಾತ ಜಂಬೂ ಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕುರಿತು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷದ ನಾಯಕರುಗಳ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕಿದ್ದಾರೆ. ಅದರ ಹೊರತಾಗಿಯೂ ಸಚಿವ ಸ್ಥಾನದ ಆಕಾಂಕ್ಷಿಗಳು ಪದೇಪದೇ ಮಾತನಾಡುತ್ತಲೇ ಇರುವುದು ಮುಜುಗರ ಉಂಟುಮಾಡಿದೆ.
ಡಿ.ಕೆ.ಶಿವಕುಮಾರ್ ಅವರ ಬೆಳಗಾವಿ ಪ್ರವಾಸ ಉದ್ದೇಶಪೂರ್ವಕವಾಗಿಯೇ ಇದ್ದು, ಜಾರಕಿಹೊಳಿ ಸಹೋದರರ ಕುಟುಂಬಕ್ಕೆ ಸವಾಲೆಸೆದಿದೆ ಎಂದು ಪರಿಭಾವಿಸಲಾಗಿದೆ. ಈ ಹಿಂದೆ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪದಿಂದಾಗಿಯೇ ಜೆಡಿಎಸ್, ಕಾಂಗ್ರೆಸ್ ಸರ್ಕಾರ ಪತನವಾಗಿತ್ತು. ಅನಂತರ ತಪ್ಪನ್ನು ತಿದ್ದಿಕೊಂಡಿದ್ದ ಕಾಂಗ್ರೆಸ್ ನಾಯಕರು ಜಿಲ್ಲೆಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಹಂತದಲ್ಲೂ ನಿರ್ಣಯ ಕೈಗೊಳ್ಳುತ್ತಾ ಬಂದರು.
ಪರಿಸ್ಥಿತಿ ಸುಧಾರಿಸುತ್ತಿರುವ ಹಂತದಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್‍ರವರು ಹಿರಿಯ ನಾಯಕ ಜಾರಕಿಹೊಳಿ ಸೆಡ್ಡು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಡಿ.ಕೆ.ಶಿವಕುಮಾರ್‍ರವರ ಬೆಂಬಲವಿದೆ ಎಂಬುದು ಬಹಳಷ್ಟು ನಾಯಕರನ್ನು ಕೆರಳಿಸಿದೆ. ಹೀಗಾಗಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುವ ಸತೀಶ್ ಜಾರಕಿಹೊಳಿಯವರು ಪಕ್ಷಕ್ಕೆ ತಾವು ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮೀರಿ ನಾವು ಬೆಳೆದಿದ್ದೇವೆ, ಅವರು ನಮಗೆ ಸ್ರ್ಪಧಿ ಅಲ್ಲ ಎಂಬ ಉದಾಸೀನದ ಮಾತುಗಳನ್ನಾಡಿದ್ದಾರೆ.
ಇದಕ್ಕೆ ಪ್ರತ್ಯುತ್ತರಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್, ತಮ್ಮ ಮೌನ ಕೂಡ ದೌರ್ಬಲ್ಯ ಅಲ್ಲ ಎಂದು ತಿರುಗೇಟು ನೀಡಿರುವುದು ಕುತೂಹಲಕಾರಿಯಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಆಗಮಿಸಿದ ವೇಳೆ ಸ್ಥಳೀಯ ಶಾಸಕರೊಬ್ಬರೂ ಕೂಡ ಅವರ ಜೊತೆಗಿಲ್ಲದಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿತ್ತು. ಆದರೆ ಎಲ್ಲಾ ಶಾಸಕರು ದಸರಾ ಹಬ್ಬದ ಸಂಭ್ರಮದಲ್ಲಿದ್ದು, ಅಧ್ಯಕ್ಷರ ಭೇಟಿ ದಿಢೀರ್ ನಿಗದಿಯಾದ್ದರಿಂದ ಅವರನ್ನು ಬರಮಾಡಿಕೊಳ್ಳಲು ಯಾರೂ ಹೋಗಿರಲಿಲ್ಲ ಎಂಬ ಸಬೂಬು ಹೇಳಲಾಗಿದೆ.
ಮಣಿಪುರದಲ್ಲಿ ಸ್ಪೋಟಕಗಳೊಂದಿಗೆ ಉಗ್ರನ ಬಂಧನ
ವಾಸ್ತವವಾಗಿ ಡಿ.ಕೆ.ಶಿವಕುಮಾರ್‍ರ ಬೆಳಗಾವಿಯಲ್ಲನ ಕಾರ್ಯಕ್ರಮ ಸುಮಾರು 15 ದಿನಗಳ ಹಿಂದೆಯೇ ನಿಗದಿಯಾಗಿತ್ತು. ಕೊನೆ ಹಂತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಅವರ ನಡುವಿನ ಮುಸುಕಿನ ಗುದ್ದಾಟ ತೀವ್ರವಾಗಿದ್ದರಿಂದ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಗೆ ಭೇಟಿ ನೀಡಬಾರದು ಎಂಬ ಸಂದೇಶವನ್ನು ಸತೀಶ್ ಜಾರಕಿಹೊಳಿ ರವಾನಿಸಿದ್ದರು ಎನ್ನಲಾಗಿದೆ.
ಅದನ್ನು ಮೀರಿ ಆಗಮಿಸಿದ್ದರಿಂದಾಗಿ ಸ್ಥಳೀಯ ಶಾಸಕರನ್ನು ಡಿ.ಕೆ.ಶಿವಕುಮಾರ್ ಅವರ ಭೇಟಿಯಿಂದ ದೂರ ಇರುವಂತೆ ಸತೀಶ್ ಜಾರಕಿಹೊಳಿ ನೋಡಿಕೊಂಡರು ಎಂದು ಹೇಳಲಾಗಿದೆ. ಈ ಸಂಘರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಂಡೂ ಕಾಣದಂತೆ ಜಾಣ ಮೌನಕ್ಕೆ ಶರಣಾಗಿದ್ದಾರೆ.
ಇತ್ತ ಕೆಲವು ಶಾಸಕರು ಡಿ.ಕೆ.ಶಿವಕುಮಾರ್‍ರಿಗೆ 70 ಕ್ಕೂ ಅಕ ಶಾಸಕರ ಬೆಂಬಲವಿದೆ ಎಂದು ಹೇಳುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ದಿನೇದಿನೇ ಬೆಳಗಾವಿಯ ರಾಜಕಾರಣದ ಕಿಚ್ಚು ಹೆಚ್ಚುತ್ತಿದ್ದು, ಇದನ್ನು ಆರಂಭದಲ್ಲೇ ತಣಿಸಲು ಹೈಕಮಾಡ್ ಮಧ್ಯಪ್ರವೇಶ ಅನಿವಾರ್ಯ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.