ಬೆಂಗಳೂರು, ಜ.11- ಅಧಿಕಾರ ಹಂಚಿಕೆಯ ನಡುವೆಯೂ ಅಧಿಕಾರ ಹಂಚಿಕೆಯ ಗೊಂದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ ತಿಂಗಳಿನಲ್ಲಿ ತಮ್ಮ ದಾಖಲೆಯ 17ನೇ ಬಜೆಟ್ ಮಂಡನೆಗೆ ಸರ್ವಸಿದ್ಧತೆಗಳನ್ನು ಆರಂಭಿಸಿದ್ದಾರೆ.
ಸಂಕ್ರಾಂತಿಯ ನಂತರ ನಾಯಕತ್ವ ಬದಲಾವಣೆಯಾಗಲಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ, ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬೆಲ್ಲ ಚರ್ಚೆಗಳು ಕಳೆದ ಸೆಪ್ಟೆಂಬರ್ ನಿಂದಲೂ ನಡೆಯುತ್ತಲೇ ಇವೆ. ರಾಜಕೀಯವಾದ ಕ್ರಾಂತಿಯ ಈ ಚರ್ಚೆಗಳು ನಾಲ್ಕು ತಿಂಗಳಾದರೂ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ.
ಡಿ.ಕೆ.ಶಿವಕುಮಾರ್ ಅವರ ಬಣದ ಶಾಸಕರು ದೆಹಲಿ ಯಾತ್ರೆ ನಡೆಸಿ ತಮ ನಾಯಕರನ್ನು ಮುಖ್ಯಮಂತ್ರಿ ಮಾಡಿ ಎಂದು ಒತ್ತಡ ಹಾಕಿದ್ದರು. ಸಿದ್ದರಾಮಯ್ಯ ಅವರ ಬಣದ ಶಾಸಕರು ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವಧಿ ಪೂರೈಸಬೇಕು ಎಂದು ಪಟ್ಟು ಹಿಡಿದ್ದಾರೆ.
ಡಿ.ಕೆ.ಶಿವಕುಮಾರ್ ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಕೆಲ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆ ನಾಯಕತ್ವ ಮುಂದುವರಿಯಲಿದೆಯೋ ಇಲ್ಲವೋ ಎಂಬ ಗೊಂದಲಗಳು ಬಾರಿ ಚರ್ಚೆಗೆ ಗ್ರಾಸವಾಗಿವೆ.
ಅಂತಹ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್ ಸೃಷ್ಟಿಸಿಲ್ಲ. ಸ್ಥಳೀಯ ನಾಯಕರೇ ಗೊಂದಲ ಮಾಡಿಕೊಂಡಿದ್ದಾರೆ. ಅವರೇ ಬಗೆಹರಿಸಿಕೊಳ್ಳಬೇಕು ಎಂದಿದ್ದರು.
ಅಲ್ಲಿಗೆ ಡಿ.ಕೆ.ಶಿವಕುಮಾರ್ ಬಣದ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಯಿತು. ಸಿದ್ದರಾಮಯ್ಯ ಅವರು ನಿರಾಳರಾಗಿ ತಮ ಕೆಲಸವನ್ನು ಮುಂದುವರಿಸಲು ಆರಂಭಿಸಿದ್ದಾರೆ. ಪ್ರತಿ ವರ್ಷ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್ ಮಂಡಿಸಲಿದೆ. ಆನಂತರ ರಾಜ್ಯ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಮಾರ್ಚ್ 6 ರಂದು ಹಣಕಾಸು ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಇದಕ್ಕಾಗಿ ಈಗಾಗಲೇ ಸಿದ್ದರಾಮಯ್ಯ ಅವರು ಪೂರ್ವ ತಯಾರಿಗಳನ್ನು ಆರಂಭಿಸಿದ್ದಾರೆ. ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೂ ಬಜೆಟ್ ಪೂರ್ವ ಮಾಹಿತಿ ಕಲೆ ಹಾಕಲು ಆದೇಶ ನೀಡಿದ್ದಾರೆ. ಕಳೆದ ಬಜೆಟ್ ನಲ್ಲಿ ಘೋಷಿಸಲಾಗಿದ್ದ ಯೋಜನೆಗಳೆಷ್ಟು, ಎಷ್ಟು ಜಾರಿಗೆ ಬಂದಿವೆ. ಬಾಕಿ ಉಳಿದಿರುವುದೆಷ್ಟು ? ಬಜೆಟ್ ನಲ್ಲಿ ಮಂಜೂರಾದ ಅನುದಾನದಲ್ಲಿ ಖರ್ಚಾಗಿರುವುದು ಮತ್ತು ಖರ್ಚಾಗದೇ ಇರುವ ಹಣಕಾಸಿನ ವಿವರ ಕಲೆ ಹಾಕುವಂತೆಯೂ ಸಲಹೆ ನೀಡಿದ್ದಾರೆ. ಜೊತೆಗೆ ಮುಂದಿನ ಬಜೆಟಿನಲ್ಲಿ ಘೋಷಿಸಬೇಕಾದ ಹೊಸ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡುವಂತೆ ತಾಕಿತು ಮಾಡಿದ್ದಾರೆ.
ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಪಾಲಿಕೆಗಳು ಸೇರಿದಂತೆ ರಾಜ್ಯದ ನಗರ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ಏಪ್ರಿಲ್ ಅಥವಾ ಮೇ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ಬಜೆಟ್ ನಲ್ಲಿ ಜನಪರ ಯೋಜನೆಗಳನ್ನು ಘೋಷಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಮಾರ್ಚ್ ಎರಡರಿಂದ ಜಂಟಿ ವಿಧಾನ ಮಂಡಲ ಅಧಿವೇಶನ ಆರಂಭವಾಗಲಿದೆ. ಆರಂಭದ ದಿನದಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ವಾರ ನಾಲ್ಕು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ಮತ್ತು ಉತ್ತರ ನಡೆಯಲಿದೆ.
ಮಾರ್ಚ್ 6ರಂದು ಶುಕ್ರವಾರ ಮುಖ್ಯಮಂತ್ರಿಯವರು ತಮ ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ 16 ಬಜೆಟ್ ಗಳನ್ನು ಮಂಡಿಸಿರುವ ಸಿದ್ದರಾಮಯ್ಯ ಅವರು 17ನೇ ದಾಖಲೆಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ.
