ಮುಂಬೈ,ಸೆ.4- ಚಿತ್ರನಟಿ ಕಮ್ ಸಂಸದೆ ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶನ ನೀಡುವಂತೆ ಕೋರಿ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಸೆಪ್ಟೆಂಬರ್ 6 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿರುವ ಮಾಜಿ ಪ್ರಧಾನಿ ಇಂದಿರಾಗಾಂಧಿ ಜೀವನಚರಿತ್ರೆಯ ಎಮರ್ಜೆನ್ಸಿ ಚಿತ್ರದಲ್ಲಿ ಸಿಖ್‌ರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಶಿರೋಮಣಿ ಅಕಾಲಿದಳ ಸೇರಿದಂತೆ ಸಿಖ್ ಸಂಘಟನೆಗಳು ಚಿತ್ರ ಬಿಡುಗಡೆ ಮಾಡಬಾರದು ಎಂದು ಒತ್ತಡ ಹಾಕುತ್ತಿವೆ.
ಸಿಬಿಎಫ್‌ಸಿಯು ಕಾನೂನುಬಾಹಿರವಾಗಿ ಮತ್ತು ನಿರಂಕುಶವಾಗಿ ಪ್ರಮಾಣೀಕರಣವನ್ನು ತಡೆಹಿಡಿದಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಲಾಗಿದೆ.ವಕೀಲರ ಪ್ರಕಾರ, ಸೆನ್ಸಾರ್ ಮಂಡಳಿಯು ಪ್ರಮಾಣಪತ್ರದೊಂದಿಗೆ ಸಿದ್ಧವಾಗಿದೆ, ಆದರೆ ಅದನ್ನು ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅರ್ಜಿಯನ್ನು ತುರ್ತು ವಿಚಾರಣೆಗಾಗಿ ನ್ಯಾಯಮೂರ್ತಿಗಳಾದ ಬಿ ಪಿ ಕೊಲಬವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ವಿಭಾಗೀಯ ಪೀಠದ ಮುಂದೆ ಉಲ್ಲೇಖಿಸಲಾಗಿದ್ದು ಇಂದು ತೀರ್ಪು ಹೊರಬೀಳುವ ಸಾಧ್ಯತೆಗಳಿವೆ.
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸಿ ಮತ್ತು ಸಹ-ನಿರ್ಮಾಣ ಮಾಡಿರುವ ಕಂಗನಾ ರಣಾವತ್ ಚಿತ್ರ ಬಿಡುಗಡೆಯನ್ನು ವಿಳಂಬಗೊಳಿಸಲು ಸಿಬಿಎಫ್‌ಸಿಯ ಪ್ರಮಾಣೀಕರಣವನ್ನು ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ್ದಾರೆ.