ಬೆಂಗಳೂರು, ಸೆ.4- ನಗರದಲ್ಲಿ ರಸ್ತೆಗುಂಡಿ ಮುಚ್ಚಲು ಉಪಮುಖ್ಯಮಂತ್ರಿಗಳು 15 ದಿನ ಗಡುವು ನೀಡಿದ್ದು, ಎಲ್ಲ ವಲಯಗಳಲ್ಲೂ ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ್ಯಪ್‌ನಲ್ಲಿ ಸಾರ್ವಜನಿಕರು ಹಾಗೂ ಟ್ರಾಫಿಕ್ ಪೊಲೀಸರು ಗುಂಡಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದು, ಆ ಗುಂಡಿಗಳನ್ನು ಮುಚ್ಚಲು ಎಲ್ಲ ವಲಯಗಳ ಅಧಿಕಾರಿಗಳಿಗೆ, ಎಂಜಿನಿಯರ್ಗಳಿಗೆ ಸೂಚನೆ ನೀಡಿದ್ದು, ರಸ್ತೆಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ.
ಆ್ಯಪ್‌ನಲ್ಲಿ 1800 ದೂರುಗಳು ಬಂದಿದ್ದು, ಕಾಲಮಿತಿಯೊಳಗೆ ನಗರದೊಳಗಿನ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.ಕಸ ವಿಲೇವಾರಿ ಗುತ್ತಿಗೆದಾರರ ಬಿಲ್ ಬಾಕಿ ವಿಚಾರ ಕುರಿತಂತೆ ಮಾತನಾಡಿದ ಅವರು, ಏಪ್ರಿಲ್‌ನಿಂದ ಬಿಲ್ ಬಾಕಿ ಇದೆ. ಈ ಸಂಬಂಧ ಕಸ ವಿಲೇವಾರಿ ಗುತ್ತಿಗೆದಾರರ ಜತೆ ಚರ್ಚಿಸಲಾಗುವುದು ಎಂದರು.
ಡಿಸಿಎಂ ಜತೆ ಚೆನ್ನೈ ಭೇಟಿ ವಿಚಾರ ಕುರಿತು ಮಾತನಾಡಿದ ಅವರು, ವಿವಿಧ ನಗರಗಳಲ್ಲಿನ ತ್ಯಾಜ್ಯ ವಿಲೇವಾರಿ ಬಗ್ಗೆ ಪರಿಶೀಲನೆಗಾಗಿ ಭೇಟಿ ನೀಡಲಾಗಿತ್ತು. ಕಸ ಸಂಗ್ರಹ, ಸ್ಟ್ರೀಟ್ ನಿರ್ವಹಣೆ ಚೆನ್ನೈನಲ್ಲಿ ಉತ್ತಮವಾಗಿದೆ. ಅದೇ ಮಾದರಿಯಲ್ಲಿ ಜತೆಗೆ ಬೇರೆ ಬೇರೆ ನಗರಗಳ ಮಾದರಿಯನ್ನು ಪರಿಶೀಲಿಸಿ ನಮದೇ ಆದ ಪ್ರಣಾಳಿಕೆ ಸಿದ್ಧ ಮಾಡಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವ ನಿರ್ಧಾರ ಮಾಡಲಾಗಿದೆ ಎಂದರು.
ಪಿಒಪಿ ಗಣೇಶಮೂರ್ತಿಗಳ ಮಾರಾಟ ಹಾಗೂ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಪಿಒಪಿ ಹಾಗೂ ಬಣ್ಣಲೇಪಿತ ಮೂರ್ತಿಗಳು ನೀರಿನಲ್ಲಿ ತ್ವರಿತವಾಗಿ ಮುಳುಗಿ ಕರಗುವುದಿಲ್ಲ. ಹಾಗಾಗಿ ಎಲ್ಲರೂ ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಕರೆ ನೀಡಿದರು.