ನವದೆಹಲಿ,ಸೆ.6- ಗೌರಿಗಣೇಶ ಹಬ್ಬದ ದಿನದಂದು ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿರುವ ಕೇಂದ್ರ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಕೆ ಮಾಡಲು ಮುಂದಾಗಿದೆ.ನೂತನ ಪರಿಷ್ಕೃತ ದರವು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವ ಸಾಧ್ಯತೆ ಇದ್ದು, ಪ್ರತಿ ಲೀಟರ್ಗೆ ಡೀಸೆಲ್ ದರ 6 ರೂ. ಹಾಗೂ ಪೆಟ್ರೋಲ್ ದರವನ್ನು 4 ರೂ. ಕಡಿತ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 72.75ರಿಂದ 70 ಡಾಲರ್ಗೆ ಇಳಿಕೆಯಾಗಿರುವುದರಿಂದ ತೈಲ ಬೆಲೆಯನ್ನು ಇಳಿಸಲು ಸರ್ಕಾರ ಸಮತಿಸಿದೆ.ಈಗಾಗಲೇ ಪ್ರಧಾನಿ ನರೇಂದ್ರಮೋದಿ ಅವರು ಕೇಂದ್ರ ಪೆಟ್ರೋಲಿಯಂ ಸಚಿವರು ಹಾಗೂ ತೈಲ ಪೂರೈಕೆ ಮಾಡುವ ಕಂಪನಿಗಳ ಜೊತೆ ಚರ್ಚೆ ನಡೆಸಿದ್ದು, ಪರಿಷ್ಕೃತ ದರ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ಜಮು ಮತ್ತು ಕಾಶೀರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆ ನಡೆಯತ್ತಿರುವ ಹಿನ್ನಲೆಯಲ್ಲಿ ಪ್ರತಿಪಕ್ಷಗಳು ತೈಲ ದರವನ್ನು ಪ್ರಸ್ತಾಪಿಸಬಹುದೆಂಬ ಹಿನ್ನಲೆಯಲ್ಲಿ ದರ ಇಳಿಸುವ ಬಗ್ಗೆ ಚಿಂತನೆ ನಡೆಸಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗಿದ್ದರೂ ಮೋದಿ ಸರ್ಕಾರ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಕೆ ಮಾಡಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುವ ಸಾಧ್ಯತೆ ಇದೆ. ಇದನ್ನು ಮನಗಂಡೇ ದರ ಇಳಿಕೆಗೆ ಚಿಂತನೆ ನಡೆಸಲಾಗಿದೆ.
ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್ಗೆ 85 ರೂ. ಇತ್ತು. ಈ ವೇಳೆಯೇ ಡೀಸೆಲ್ ಮತ್ತು ಪೆಟ್ರೋಲ್ ದರವನ್ನು ಇಳಿಸಬೇಕೆಂಬ ಬೇಡಿಕೆ ಹೆಚ್ಚಾಗಿತ್ತು.ತೈಲ ದರವನ್ನು ಕೇಂದ್ರ ಸರ್ಕಾರ ತೀರ್ಮಾನಿಸುವುದಿಲ್ಲ. ಬದಲಿಗೆ ತೈಲ ಕಂಪನಿಗಳಾದ ಭಾರತೀಯ ತೈಲ ನಿಗಮ(ಐಓಸಿ), ಭಾರತ್
ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಹಾಗೂ ಹಿಂದೂಸ್ಥಾನ್ ಪೆಟ್ರೀಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ನಿರ್ಧರಿಸುತ್ತವೆ. ಕಳೆದ ಮಾ.14ರಂದು ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ 2 ರೂ. ಕಡಿತ ಮಾಡಿತ್ತು. ತೈಲ ದರವನ್ನು ಕಡಿಮೆ ಮಾಡಬೇಕೆಂದು ರಾಜ್ಯ ಸರ್ಕಾರಗಳು ಕೂಡ ಕೇಂದ್ರಕ್ಕೆ ಮನವಿ ಮಾಡಿದ್ದನ್ನು ಸರಿಸಬಹುದು.