ಇಂಫಾಲ(ಮಣಿಪುರ),ಸೆ.8- ಬೂದಿಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಏಳು ಜನರು ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.ಸ್ಥಳೀಯರು ಸೆಂಟ್ರಲ್ ಫೋರ್ಸ್‌ನ ಕಾರುಗಳನ್ನು ನಿಲ್ಲಿಸಲು ಆಗ್ರಹಿಸಿದ್ದರಿಂದ ತೌಬಲ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಶಂಕಿತ ಕುಕಿ ದಂಗೆಕೋರರು ರಾಜ್ಯದ ರಾಜಧಾನಿ ಇಂಫಾಲ್‌ನಿಂದ 229 ಕಿಮೀ ದೂರದಲ್ಲಿರುವ ಜಿಲ್ಲೆಯ ನುಂಗ್‌ಚಾಪ್ಪಿ ಗ್ರಾಮದ ಮೇಲೆ ದಾಳಿ ಮಾಡಿರುವುದಲ್ಲದೆ, ಯುರೆಂಬಮ್ ಕುಲೇಂದ್ರ ಸಿಂಘಾ ಎಂಬವರನ್ನು ಕೊಂದು ಹಾಕಿದ್ದಾರೆ. ಇದರಿಂದ ಕಳೆದ ಒಂದು ವಾರದಲ್ಲಿ ಆರು ಜನರು ಬಲಿಯಾದಂತಾಗಿದೆ.
ಶಂಕಿತ ಸಶಸ್ತ್ರಧಾರಿಗಳು ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಮನೆ ಮೇಲೆ ರಾಕೆಟ್ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಆರು ಜನರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಪ್ರತಿ ದಾಳಿಯಲ್ಲಿ ಚುರಾಚಂದಪುರ್ ಜಿಲ್ಲೆಯಲ್ಲಿ ಮೂರು ಬಂಕರ್‌ಗಳನ್ನು ನಾಶಪಡಿಸಿದ್ದಾರೆ. ಜತೆಗೆ ಮಿಲಿಟರಿ ಹೆಲಿಕಾಪ್ಟರ್ ಮೂಲಕ ಆಗಸದಿಂದ ಗಸ್ತು ನಡೆಸಲಾಗಿದೆ.
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ, ಈ ಪ್ರದೇಶದಲ್ಲಿ ನಿಷೇಧಾಜ್ಞೆ ಹೊರಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಎರಡು ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ನಿದ್ದೆಯಲ್ಲಿದ್ದಾಗ ಒಬ್ಬ ವೃದ್ಧನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ನುಂಚಾಪಿ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಉಗ್ರಗಾಮಿಗಳು ಭಾರೀ ಗುಂಡಿನ ಚಕಮಕಿಯಲ್ಲಿ ತೊಡಗಿದ್ದು, ಮೂವರು ಶಂಕಿತ ಕುಕಿ ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ.
ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಣೆ:
ಈ ಘಟನೆಗಳ ಬೆನ್ನಲ್ಲೇ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ ವಕ್ತಾರ ಖುರೈಜಮ್ ಅಥೌಬಾ ಅವರು ಅನಿರ್ದಿಷ್ಟಾವಧಿಯ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಕುಕಿ ಸಮುದಾಯದ ಆಕ್ರಮಣ ಹೆಚ್ಚಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕುಕಿ ಆಕ್ರಮಣ ಉಲ್ಬಣಗೊಂಡಿದ್ದು, ಮತ್ತೆ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ಕೆಲವು ದಿನಗಳಲ್ಲಿ ಇಂಫಾಲ್ ಪಶ್ಚಿಮದಲ್ಲಿ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಿದ ಹಲವು ಘಟನೆಗಳು ನಡೆದಿವೆ. ಇದರಲ್ಲಿ ಕೆಲ ಜನರು ಅಸುನೀಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇಂದು ಮತ್ತೆ ಎರಡು ಕ್ಷಿಪಣಿ ದಾಳಿಗಳು ನಡೆದಿವೆ.
ಸುಮಾರು 7 ಕಿಲೋಮೀಟರ್ ದೂರದಿಂದ ಗುಂಡು ಹಾರಿಸಲಾಗಿದ್ದು, ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಚಿನ್-ಕುಕಿ ನಾರ್ಕೋ ಭಯೋತ್ಪಾದಕ ಗುಂಪುಗಳು ಆಶ್ರಯ ಪಡೆದಿವೆ. ಶುಕ್ರವಾರದ ದಾಳಿಯನ್ನು ಇವರು ನಡೆಸಿದ ಮಾರಣಾಂತಿಕ ದಾಳಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ ಎಂದು ಅಥೌಬಾ ತಿಳಿಸಿದ್ದಾರೆ.
ಕುಕಿ ಆಕ್ರಮಣದಲ್ಲಿ ಹೆಚ್ಚಳವಾಗಿದ್ದು, ಕಳೆದೆರಡು ದಿನಗಳಲ್ಲಿ ಡ್ರೋನ್ ಬಾಂಬ್ ದಾಳಿಯ ಹಲವು ಘಟನೆಗಳು ನಡೆದಿವೆ. ಶುಕ್ರವಾರ ಎರಡು ರಾಕೆಟ್ ದಾಳಿಗಳು ನಡೆದ್ದು, ಮಣಿಪುರದ ಮೊದಲ ಸಿಎಂ ಮೈರೆಂಬಮ್ ಕೊಯಿರೆಂಗ್ ಸಿಂಗ್ ಅವರ ತವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಇದರಲ್ಲಿ ಅವರ ಪ್ರತಿಮೆ ಮತ್ತು ಆಸ್ತಿ ಧ್ವಂಸಗೊಂಡಿದ್ದು, ಪರಿಸ್ಥಿತಿ ಕೈ ಮೀರಿ ಹೋಗಿದೆ.
ಇದು ಸಾಮಾನ್ಯ ದಾಳಿಯಲ್ಲ, ಕಾರಣ ರಾಕೆಟ್‌ನ್ನು ದೂರದ ಬೆಟ್ಟದಿಂದ ಉಡಾಯಿಸಲಾಗಿದೆ. ಕುಕಿ ಸಶಸ್ತ್ರ ಗುಂಪುಗಳು ಯಾವುದೇ ರೀತಿಯ ಆಕ್ರಮಣವನ್ನು ಮಾಡದಂತೆ ತಡೆಯಲು ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ತಪ್ಪಲಿನ ಪ್ರದೇಶಗಳಲ್ಲಿರುವ ಇವರು ಅಸಹಾಯಕರಾಗಿದ್ದಾರೆ, ಎಂದು ಅವರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಡ್ರೋನ್‌ಗಳು ಕಂಡು ಬಂದ ಬಳಿಕ ಮಣಿಪುರದ ಬಿಷ್ಣುಪುರ ಹಾಗೂ ಇಂಫಾಲ್ ಪೂರ್ವ ಜಿಲ್ಲೆಗಳ ಜನರು ಶುಕ್ರವಾರ ಮನೆಗಳ ಲೈಟ್‌ಗಳನ್ನು ಆಫ್ ಮಾಡಿ ರಕ್ಷಣೆ ಪಡೆದಿದ್ದರು. ಫೆರಿಫೆರಲ್ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿವೆ. ಸಶಸ್ತ್ರಧಾರಿಗಳು ಬಾಂಬ್ ದಾಳಿಗೆ ಡ್ರೋನ್‌ಗಳನ್ನು ಬಳಸಲು ಆರಂಭಿಸಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಮೊದಲ ಘಟನೆಯಲ್ಲಿ ಇಂಫಾಲ ಪಶ್ಚಿಮ ಜಿಲ್ಲೆಯ ಕೌಟ್ರುಕ್ ಗ್ರಾಮದ ಮೇಲೆ ಸೆಪ್ಟೆಂಬರ್ 1ರಂದು ಡ್ರೋನ್ ದಾಳಿ ನಡೆದಿತ್ತು. ಇದಾದ ಬಳಿಕ ಬಂದೂಕಿನ ಮೂಲಕವೂ ದಾಳಿ ನಡೆಸಿ ಇಬ್ಬರನ್ನು ಕೊಲ್ಲಲಾಗಿದ್ದರೆ, 9 ಜನರು ಇದರಲ್ಲಿ ಗಾಯಗೊಂಡಿದ್ದರು. ಮರುದಿನ ಸೆಂಜಮ್ ಚಿರಾಜ್‌ನಲ್ಲಿ ಇನ್ನೊಂದು ಡ್ರೋನ್ ದಾಳಿ ನಡೆದಿತ್ತು. ಮೂರು ಕಿಲೋಮೀಟರ್ ದೂರದಲ್ಲಿ ನಡೆದ ಈ ದಾಳಿಯಲ್ಲಿ ಮೂವರು ಗಾಯಗೊಂಡಿದ್ದರು.
ಸಿಎಂ ರಾಜ್ಯಪಾಲರ ಭೇಟಿ:
ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ರಾಜ್ಯಪಾಲ ಎಲ್.ಆಚಾರ್ಯ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಎನ್.ಬಿರೇನ್ ಸಿಂಗ್ ಅವರ ರಾಜೀನಾಮೆ ಬಗ್ಗೆ ಊಹಾಪೋಹಗಳ ನಡುವೆ ರಾಜ್ಯಪಾಲರನ್ನು ಭೇಟಿ ಮಾಡಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಈ ಕುರಿತು ಮಾತನಾಡಿದ ಬಿರೇನ್ ಸಿಂಗ್, ರಾಜ್ಯಪಾಲರು ಇಂಫಾಲ್‌ಗೆ ಹಿಂದಿರುಗಿದ ಬಳಿಕ ರಾಜ್ಯದ ಪರಿಸ್ಥಿತಿಯನ್ನು ತಿಳಿಸಲು ಹೋಗಿದ್ದೆ. ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ವಿದೇಶಿ ಅಂಶಗಳನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಅಂತಹ ಅಂಶಗಳ ವಿರುದ್ಧ ಹೆಚ್ಚು ಆಕ್ರಮಣಕಾರಿ ನಿಲುವು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಬಯಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಸಂಬಂಧಿಸಿದಂತೆ ಸಿಎಂ ಬಿರೇನ್ ಸಿಂಗ್ ರಾಜೀನಾಮೆಯ ಊಹಾಪೋಹಗಳ ಮಧ್ಯೆ, ಬಿಜೆಪಿಯ ಉನ್ನತ ಮೂಲಗಳು ಅವರ ಬೆಂಬಲಕ್ಕೆ ನಿಂತಿವೆ. ಬಿರೇನ್ ಸಿಂಗ್ ಸಿಎಂ ಆಗಿ ಮುಂದುವರೆಯಲಿದ್ದಾರೆ, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ತಿಳಿಸಿದೆ.