Friday, November 22, 2024
Homeರಾಜಕೀಯ | Politicsನನಗೂ ಸಿಎಂ ಆಗುವ ಆಸೆ ಇದೆ : ಸಚಿವ ಎಂ.ಬಿ.ಪಾಟೀಲ್

ನನಗೂ ಸಿಎಂ ಆಗುವ ಆಸೆ ಇದೆ : ಸಚಿವ ಎಂ.ಬಿ.ಪಾಟೀಲ್

ವಿಜಯಪುರ,ಸೆ.8- ಶಿವಾನಂದ ಪಾಟೀಲರನ್ನು ಕಾಂಗ್ರೆಸ್ಗೆ ಕರೆತಂದಿದ್ದು ನಾನಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಎಂ.ಬಿ.ಪಾಟೀಲ್ ಪಕ್ಷದಲ್ಲಿ ಅನಗತ್ಯವಾದ ವಿವಾದಗಳಿಗೆ ಅವಕಾಶ ಮಾಡಿಕೊಡದೆ ಒಟ್ಟಾಗಿರುವುದು ಸೂಕ್ತ ಎಂದು ಶಿವಾನಂದ ಪಾಟೀಲ್ಗೆ ಸಲಹೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ. ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಬೇಕು, ಜನಸೇವೆ ಮಾಡಬೇಕು ಎಂಬ ಬಯಕೆ ಇದೆ. ಆದರೆ ದುರಾಸೆ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್ನಲ್ಲಿ ನಾನು ಸತೀಶ್ ಜಾರಕಿಹೊಳಿ ಅವರಿಗಿಂತಲೂ ಹಿರಿಯನಿದ್ದೇನೆ. ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ನಾವೆಲ್ಲಾ ಅಂದು ಸಮಕಾಲೀನರು. ನಮಗಿಂತ ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಹಿರಿಯರಿದ್ದಾರೆ. ನಮಗೆಲ್ಲರಿಗಿಂತಲೂ ಮಲ್ಲಿಕಾರ್ಜುನ ಖರ್ಗೆ ಅತ್ಯಂತ ಹಿರಿಯರಿದ್ದಾರೆ. ನಾನು ಮುಖ್ಯಮಂತ್ರಿಯಾಗುವುದಾದರೆ ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ವಿಜಯಪುರ ಜಿಲ್ಲೆ ಮತ್ತು ರಾಜ್ಯದ ಜನ ಖುಷಿಪಡುತ್ತಾರೆ ಎಂದು ಹೇಳಿದರು.

ಮುಖ್ಯಮಂತ್ರಿಯಾಗುವುದು ಸ್ವಯಂ ಘೋಷಿತವಲ್ಲ. ಪಕ್ಷದ ಶಾಸಕರು, ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಬೇಕು. ಸದ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತಾರೆ. ನ್ಯಾಯಾಲಯದಲ್ಲಿ ಅವರ ವಿರುದ್ಧದ ಪ್ರಕರಣ ಬಿದ್ದುಹೋಗುತ್ತದೆ. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಮುಂದೊಂದು ದಿನ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದರು.

ಶಿವಾನಂದ ಪಾಟೀಲ್ ಅವರು ವಿವಾದಿತ ಹೇಳಿಕೆ ನೀಡಿದಾಗ ನಾನು ಪ್ರತಿಕ್ರಿಯಿಸಿದ್ದೇನೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲಾ ಒಟ್ಟಾಗಿದ್ದೇವೆ. ಶಿವನಂದ ಪಾಟೀಲ್ ಮತ್ತು ಸೊರಗಾವಿ ಅವರು 2004 ರಲ್ಲಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗುವ ಆಸಕ್ತಿ ವ್ಯಕ್ತಪಡಿಸಿದ್ದರು. ಆಗ ಅವರಿಬ್ಬರ ಜೊತೆ ಮಾತುಕತೆ ನಡೆಸುವಂತೆ ಎಸ್.ಎಂ.ಕೃಷ್ಣ ಅವರು ನನಗೆ ಬಲವಂತ ಮಾಡಿದರು. ಅವರ ಒತ್ತಡಕ್ಕೆ ಮಣಿದು ನಾನು ಮಾತುಕತೆ ನಡೆಸಿದಾಗ ಶಿವಾನಂದ ಪಾಟೀಲ್, ತಾವು ಎಸ್.ಎಂ.ಕೃಷ್ಣ ಅವರೊಂದಿಗೇ ಚರ್ಚೆ ನಡೆಸುವುದಾಗಿ ಹೇಳಿದ್ದರು. ಅನಂತರ ಅವರಿಬ್ಬರ ನಡುವೆ ಯಾವ ರೀತಿಯ ಒಪ್ಪಂದಗಳಾದವೋ ನನಗೆ ಗೊತ್ತಿಲ್ಲ ಎಂದು ಹೇಳಿದರು.

2004 ರಲ್ಲಿ ನನ್ನ ವಿರುದ್ಧ ಎಂ.ಎಸ್. ರುದ್ರೇಗೌಡ ಅಭ್ಯರ್ಥಿಯಾಗಿದ್ದರು. 2008 ರಿಂದ ಈವರೆಗೂ ನಾಲ್ಕು ಬಾರಿ ಶಿವಾನಂದ ಪಾಟೀಲ್ರವರ ಸಹೋದರ ವಿಜುಗೌಡ ಪಾಟೀಲ್ ನನ್ನ ವಿರುದ್ಧ ಅಭ್ಯರ್ಥಿಯಾಗಿದ್ದಾರೆ. ಎರಡು ಬಾರಿ ಜೆಡಿಎಸ್, ಎರಡು ಬಾರಿ ಬಿಜೆಪಿಯಿಂದ ಅವರು ಟಿಕೆಟ್ ಪಡೆದು ಸ್ಪರ್ಧಿಸಿದ್ದಾರೆ.

ಈಗ ತಮ ಸಹೋದರ ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್ಗೆ ಕ್ಷೇತ್ರ ಬಿಟ್ಟುಕೊಟ್ಟರು ಎಂದು ಪದೇಪದೇ ಹೇಳುತ್ತಿದ್ದಾರೆ. ಬಿಜೆಪಿಯಲ್ಲಿರುವ ವಿಜುಗೌಡ ಪಾಟೀಲ್, ಕಾಂಗ್ರೆಸ್ನ ಕುರಿತು ಏಕೆ ಹೇಳಿಕೆ ನೀಡುತ್ತಿದ್ದಾರೆ. ಶಿವಾನಂದ ಪಾಟೀಲ್ರಿಗೂ, ಅವರಿಗೂ ಯಾವ ರೀತಿಯ ಸಂಪರ್ಕ ಎಂದು ನನಗೆ ಗೊತ್ತಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾನು ಉತ್ತರಿಸುವುದಾಗಿ ಹೇಳಿದರು.

RELATED ARTICLES

Latest News