Friday, September 20, 2024
Homeರಾಜ್ಯಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಗೌಪ್ಯ ವಿಚಾರಣೆಗೆ ಹೈಕೋರ್ಟ್ ಇಂಗಿತ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಗೌಪ್ಯ ವಿಚಾರಣೆಗೆ ಹೈಕೋರ್ಟ್ ಇಂಗಿತ

High Court directs secret inquiry into Prajwal Revanna sex scandal

ಬೆಂಗಳೂರು,ಸೆ.9- ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಪಟ್ಟ ಪ್ರಕರಣಗಳನ್ನು ಇದೇ 12 ರಂದು ಗೌಪ್ಯ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ಸ್ಪಷ್ಟಪಡಿಸಿದೆ.ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಸಿಐಡಿ ಪೊಲೀಸರು ತನಿಖೆ ನಡೆಸುವ ಕುರಿತಂತೆ ಇಂದು ಹೈಕೋರ್ಟ್ನ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಎದುರು ವಿಚಾರಣೆ ನಡೆಯಿತು.

ಆರೋಪಿ ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ವಾದ ಮಂಡಿಸಿದರೆ, ರಾಜ್ಯಸರ್ಕಾರದ ಸಿಐಡಿ ಪರವಾಗಿ ಪ್ರೊ.ರವಿವರ್ಮ ಕುಮಾರ್ ತಮ ವಾದ ಮಂಡಿಸಿದರು.ಪ್ರಕರಣದ ವಿಚಾರಣೆ ಮುಗಿದಿದ್ದು, ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ ಎಂದು ಪ್ರೊ.ರವಿವರ್ಮ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು.

ದೋಷಾರೋಪಣ ಪಟ್ಟಿಯನ್ನು ತಮಗೆ ಕೊಟ್ಟರೆ ವಾದ ಮಂಡಿಸಲು ಅನುಕೂಲವಾಗುತ್ತದೆ ಎಂದು ಪ್ರಭುಲಿಂಗ ನಾವಡಗಿ ಹೇಳಿದಾಗ, ಈ ಪ್ರಕರಣವನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದು ಸೂಕ್ತವಲ್ಲ, ಇನ್ಕ್ಯಾಮೆರಾ (ಗೌಪ್ಯ ವಿಚಾರಣೆ) ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ಆರೋಪಿ ಪರವಾಗಿ ವಾದಿಸಲು ದೋಷಾರೋಪಣ ಪಟ್ಟಿ ಹಾಗೂ ಅಗತ್ಯ ಮಾಹಿತಿ ಒದಗಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಭುಲಿಂಗ ನಾವಡಗಿ ಅವರು, ಪ್ರಥಮ ಮಾಹಿತಿ ದಾಖಲಾದಾಗ ಐಪಿಸಿ 376 ಪ್ರಕಾರ ಅತ್ಯಾಚಾರದ ಆರೋಪ ಇರಲಿಲ್ಲ. ಆದರೆ ಆನಂತರ ಈ ಕಲಂನಡಿ ವಿಚಾರಣೆ ನಡೆದಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಕರಣದ ಸವಿಸ್ತಾರವಾದ ವಾದ ಮುಕ್ತ ನ್ಯಾಯಾಲಯದಲ್ಲಿ ಬೇಡ ಎಂದು ಪುನರುಚ್ಚರಿಸಿದ ನ್ಯಾಯಮೂರ್ತಿಗಳು, ತನಿಖೆಯ ಹಂತದಲ್ಲಿ ಮೇಲ್ನೋಟಕ್ಕೆ ಆರೋಪ ಕಂಡುಬಂದ ಹಿನ್ನೆಲೆಯಲ್ಲಿ 376 ಕಲಂ ಅನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ತಪ್ಪೇನೂ ಇಲ್ಲ. ನಿಯಮಾವಳಿಗಳಲ್ಲೂ ಇದಕ್ಕೆ ಅವಕಾಶವಿದೆ ಅಲ್ಲವೇ ಎಂದು ಪ್ರಶ್ನಿಸಿದರು.

ತನಿಖೆಯ ಬಳಿಕ ಸಲ್ಲಿಸಲಾಗಿರುವ ದೋಷಾರೋಪಣ ಪಟ್ಟಿ ನಾಲ್ಕು ಸಂಪುಟಗಳಲ್ಲಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಂರಕ್ಷಿಸಲಾಗುವುದು, ಮುಂದಿನ ವಿಚಾರಣೆ ವೇಳೆ ಇದನ್ನು ಪರಿಶೀಲಿಸುವುದು ಸೂಕ್ತ ಎಂದರಲ್ಲದೆ, ಪ್ರತಿವಾದಿ ವಕೀಲರಿಗೆ ಅಗತ್ಯ ಮಾಹಿತಿ ನೀಡುವುದಾಗಿ ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಮುಂದಿನ ವಿಚಾರಣೆಯನ್ನು ಸೆ.12 ಕ್ಕೆ ನಿಗದಿಪಡಿಸಲಾಗುವುದು. ಒಂದು ವೇಳೆ ಅನನುಕೂಲತೆಗಳಿದ್ದರೆ 19ಕ್ಕೆ ನಿಗದಿಪಡಿಸಲಾಗುವುದು ಎಂದು ಹೇಳಿದರು. ಅಂತಿಮವಾಗಿ 12 ರಂದೇ ವಿಚಾರಣೆ ನಡೆಯಲಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

RELATED ARTICLES

Latest News