ಬೆಂಗಳೂರು,ಸೆ.9- ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಹಾಗೂ ಸಹಚರರಿಗೆ ವಿಶೇಷ ಆತಿಥ್ಯ ನೀಡಿರುವ ಬಗ್ಗೆ ತನಿಖೆ ಕೈಗೊಂಡಿರುವ ಆಗ್ನೇಯ ವಿಭಾಗದ ಪೊಲೀಸರು ಕೆಲವು ಖೈದಿಗಳು ಹಾಗೂ ವಿಚಾರಣಾಧೀನ ಖೈದಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.
ಕಾರಾಗೃಹದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಬಗ್ಗೆ ಫೋಟೋಗಳು ವೈರಲ್ಲಾಗುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಎಫ್ಐಆರ್ ದಾಖಲಾಗಿವೆ. ಈ ಹಿನ್ನಲೆಯಲ್ಲಿ ಇಂದು ತನಿಖಾಧಿಕಾರಿಗಳು ಜೈಲಿಗೆ ಭೇಟಿ ನೀಡಿ ಅವರುಗಳಿಂದ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್ನನ್ನು ಯಾರ್ಯಾರು , ಯಾವ ವೇಳೆ ಭೇಟಿಯಾಗುತ್ತಿದ್ದರು? ಆತನಿಗೆ ಏನೇನು ತಂದು ಕೊಡಲಾಗುತ್ತಿತ್ತು? ಜೈಲು ಆವರಣದಲ್ಲಿ ಟೇಬಲ್, ಚೇರು ವ್ಯವಸ್ಥೆ ಮಾಡಿದವರ್ಯಾರು? ಈ ರೀತಿ ಎಷ್ಟು ದಿನಗಳಿಂದ ಆತಿಥ್ಯ ನಡೆಯುತ್ತಿತ್ತು ಇಲ್ಲವೇ ಅಂದು ಮಾತ್ರವೇ ನೀಡಲಾಗುತ್ತೇ ಎಂಬಿತ್ಯಾದಿ ವಿವರಗಳನ್ನು ಸಹ ಖೈದಿ ಹಾಗೂ ವಿಚಾರಣಾಧೀನ ಖೈದಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಸಿಬ್ಬಂದಿಯೇ ಆತಿಥ್ಯ ನೀಡಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಜೈಲು ಅಧಿಕಾರಿಗಳ ಸೂಚನೆ ಮೇರೆಗೆ ನೀಡಲಾಗಿತ್ತೇ ಅಥವಾ ಖುದ್ದು ಸಿಬ್ಬಂದಿಯೇ ನೀಡಿದ್ದಾರೆಯೇ ಎಂಬಿತ್ಯಾದಿ ಮಾಹಿತಿಗಳನ್ನು ಹಲವು ಆಯಾಮಗಳಲ್ಲಿ ತನಿಖಾಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಜೈಲಿನ ಬ್ಯಾರಕ್ ಎದುರು ದರ್ಶನ್ ಮತ್ತು ಸಹಚರರು ಹರಟೆ ಹೊಡೆಯುತ್ತಿದ್ದ ಫೋಟೋ ಬಹಿರಂಗಗೊಳ್ಳುತ್ತಿದ್ದಂತೆ ಜೈಲಿನ 9 ಮಂದಿ ಅಧಿಕಾರಿ ಹಾಗೂ ಸಿಬ್ಬಂದಿ ಅಮಾನತುಗೊಂಡಿದ್ದು, ಅವರನ್ನು ಸಹ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುವುದು ಎಂದು ಗೊತ್ತಾಗಿದೆ.