ಬೆಂಗಳೂರು,ಸೆ.10- ಕರ್ನಾಟಕ ರಾಜ್ಯ ವ್ಯಾಪಾರ ವ್ಯವಹಾರಗಳಿಗೆ ಮುಕ್ತವಾಗಿದ್ದು, ಇಲ್ಲಿನ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಅಮೆರಿಕ ಮತ್ತು ಭಾರತದ ವ್ಯವಹಾರಿಕ ಪರಿಷತ್ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ, ವೈಮಾನಿಕ ಹಾಗೂ ಬಾಹ್ಯಾಕಾಶ ಸೇರಿಂದತೆ ಹಲವು ಕ್ಷೇತ್ರಗಳಲ್ಲಿನ ಜಾಗತಿಕ ಸವಾಲುಗಳನ್ನು ಎದುರಿಸಲು ಸಹಕಾರ ನೀಡುವಂತೆ ಸಲಹೆ ನೀಡಿದ್ದಾರೆ.
ಭಾರತ ಮತ್ತು ಅಮೆರಿಕ ಒಟ್ಟಾಗಿ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಅಮೆರಿಕದೊಂದಿಗೆ ಕರ್ನಾಟಕ ಸದೃಢ ಮತ್ತು ಕ್ರಿಯಾತಕ ಪಾಲುದಾರಿಕೆಯನ್ನು ಹೊಂದಿದೆ. ಇಂದಿನ ಸಭೆಯಲ್ಲಿ ವ್ಯವಹಾರಿಕ ಅವಕಾಶಗಳನ್ನಷ್ಟೇ ಚರ್ಚೆ ಮಾಡುತ್ತಿಲ್ಲ, ಹಿಂದಿಗಿಂತಲೂ ಹೆಚ್ಚಿನ ಸಂಪರ್ಕ ಹಾಗೂ ಭವಿಷ್ಯದಲ್ಲಿ ಸಮೃದ್ಧಿಯಾಗಿ ನೀಲನಕ್ಷೆಯನ್ನು ರೂಪಿಸಲಾಗುವುದು ಎಂದು ಹೇಳಿದ್ದಾರೆ.
ದೃಢವಾದ ವ್ಯವಹಾರಗಳನ್ನು ಘೋಷಿಸುವ ಬದ್ಧತೆ ಅಚಲವಾಗಿದೆ. ಅಭಿವೃದ್ಧಿ ಮತ್ತು ಯಶಸ್ಸಿಗೆ ಪೂರಕ ವಾತಾವರಣ ನಿರ್ಮಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.ಕರ್ನಾಟಕ ವೈವಿಧ್ಯ ಸಂಪನೂಲಗಳ ನಾಡು. ಕೌಶಲ್ಯಭರಿತ ಕಾರ್ಯಪಡೆಗಳಿಂದ ಹಿಡಿದು ನೈಸರ್ಗಿಕ ಸಂಪತ್ತಿನವರೆಗೂ ವೇಗವಾಗಿ ದೊರೆಯುತ್ತಿರುವ ನವೋದ್ಯಮಗಳಿಂದ ಹಿಡಿದು ಸದೃಢ ಉತ್ಪಾದನಾ ತಳಪಾಯದವರೆಗೂ ಎಲ್ಲಾ ಸಾಧ್ಯಗಳೂ ಇಲ್ಲಿವೆ.
ಜಗತ್ತಿನ ಐಟಿಬಿಟಿ, ಬಯೋಟೆಕ್ನಾಲಜಿ ಉದ್ಯಮಗಳಿಗೆ ಹಾಗೂ ನವೋದ್ಯಮಗಳಿಗೆ ಕರ್ನಾಟಕ ತವರೂರಾಗಿದೆ. ನಾವೀನ್ಯತೆ, ಸುಲಭ ವ್ಯವಹಾರಿಕ ಅವಕಾಶಗಳು, ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ನೀತಿಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯಗಳಾಗಿದ್ದು, ನಮ ಜನ ಹಾಗೂ ಜಾಗತಿಕ ಸಮುದಾಯದ ಭವಿಷ್ಯಕ್ಕಾಗಿ ಇಲ್ಲಿನ ಉದ್ಯಮಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿ ವಾತಾವರಣವನ್ನು ಬಳಸಿಕೊಳ್ಳುವಂತೆ ಕರೆ ನೀಡಿದ್ದಾರೆ.
ಸಮೃದ್ಧಿ, ಪಾಲುದಾರಿಕೆ ಮತ್ತು ಪ್ರಗತಿಯ ಭವಿಷ್ಯದತ್ತ ಒಟ್ಟಾಗಿ ಹೆಜ್ಜೆ ಇಡುವ ಜೊತೆಗೆ ಇಂದಿನ ಚರ್ಚೆ ಭವಿಷ್ಯದ ಪಾಲುದಾರಿಕೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ. ಅಮೆರಿಕ ಮತ್ತು ಕರ್ನಾಟಕದ ನಡುವೆ ಪರಸ್ಪರ ಲಾಭದಾಯಕ ಫಲಿತಾಂಶಗಳು ಸಂಭವಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.