Monday, November 25, 2024
Homeರಾಜ್ಯಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ : ನಾಳೆ ಅಂತಿಮ ತೀರ್ಪು ಸಾಧ್ಯತೆ

ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ : ನಾಳೆ ಅಂತಿಮ ತೀರ್ಪು ಸಾಧ್ಯತೆ

Prosecution against Siddaramaiah: Final judgment likely in High Court tomorrow

ಬೆಂಗಳೂರು,ಸೆ.11- ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ ಕುರಿತು ನಾಳೆ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಒಂದು ವೇಳೆ ನಾಳೆ ಸಾಧ್ಯವಾಗದಿದ್ದರೆ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಾದ ಪ್ರತಿವಾದವನ್ನು ಮುಗಿಸಿ ಅಂತಿಮ ತೀರ್ಪು ನೀಡಬಹುದು ಇಲ್ಲವೇ ತೀರ್ಪನ್ನು ಕಾಯ್ದಿರಿಸಬಹುದು.

ನಾಳೆ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸುಪ್ರೀಂಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನುಸಿಂಘ್ವಿ ವಾದ ಮಂಡಿಸಲಿದ್ದಾರೆ. ಇವರ ವಾದ ಮುಗಿದ ಬಳಿಕ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರವಾಗಿ ಸುಪ್ರೀಂಕೋರ್ಟ್‌ನ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತ ಅವರು ಅಂತಿಮ ವಾದ ಮಂಡಿಸುವರು.

ಹೀಗಾಗಿ ಹೈಕೋರ್ಟ್‌ನಲ್ಲಿ ನಾಳೆ ಸಿಎಂ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸಬಹುದಾದ ವಾದ-ವಿವಾದ ನಡೆಯಲಿದೆ. ಕಳೆದ ಬಾರಿ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಗುರುವಾರ ಅರ್ಜಿ ವಿಚಾರಣೆ ಮುಗಿಸೋಣ ಎಂದು ಅರ್ಜಿದಾರರಿಗೆ ಮೌಖಿಕ ಸೂಚನೆ ನೀಡಿದ್ದರು.

ದೂರುದಾರರ ಪರವಾಗಿ ಲಕ್ಷ್ಮಿ ಅಯ್ಯಂಗಾರ್‌, ರಾಘವನ್‌, ರಂಗನಾಥ್‌ , ಸರ್ಕಾರದ ಪರವಾಗಿ ಅಡ್ವೋಕೆಟ್‌ ಜನರಲ್‌ ಶಶಿಕುಮಾರ್‌ ಶೆಟ್ಟಿ, ರವಿವರ್ಮ ಕುಮಾರ್‌ ಸೇರಿದಂತೆ ಘಟಾನುಘಟಿ ದಿಗ್ಗಜರೇ ವಾದ ಮಂಡಿಸಿದ್ದರು.

ಏನಾಗಲಿದೆ ಸಿಎಂ ಭವಿಷ್ಯ?:
ಮುಡಾ ಪ್ರಕರಣ ಸಂಬಂಧ ದೂರುದಾರರಾದ ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ನೀಡಿದ ದೂರಿನ ಮೇರೆಗೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ರಾಜ್ಯಪಾಲರ ತೀರ್ಮಾನವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್‌ ರದ್ದುಪಡಿಸಬೇಕೆಂದು ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ಇದೀಗ ಗುರುವಾರ ಅರ್ಜಿ ವಿಚಾರಣೆಯ ವಾದ-ಪ್ರತಿವಾದ ಮುಗಿದು ರಾಜ್ಯಪಾಲರ ಕ್ರಮದ ಕುರಿತು ಹೈಕೋರ್ಟ್‌ ನೀಡಲಿರುವ ತೀರ್ಪು ಕರ್ನಾಟಕದಲ್ಲಿ ಕಾಂಗ್ರೆಸ್‌‍ ನೇತೃತ್ವದ ಸರ್ಕಾರಕ್ಕೆ ನಿರ್ಣಾಯಕವಾಗಲಿದೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ಅವರು ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್‌ ಕ್ರಮವನ್ನು ಎತ್ತಿಹಿಡಿದರೆ ಸಿದ್ದರಾಮಯ್ಯನವರಿಗೆ ಕಾನೂನಿನ ಸಂಕಷ್ಟ ಎದುರಾಗಲಿದೆ.

ಒಂದು ವೇಳೆ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್‌ ಅನೂರ್ಜಿತಗೊಳಿಸಿದರೆ ಥಾವರ್‌ಚಂದ್‌ ಗೆಹ್ಲೋಟ್‌ಗೆ ಭಾರೀ ಮುಖಭಂಗವಾಗಲಿದೆ. ವಾದ- ಪ್ರತಿವಾದದ ವೇಳೆ ಈ ಹಿಂದೆ ಪ್ರಾಸಿಕ್ಯೂಷನ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ಅನೇಕ ತೀರ್ಪುಗಳನ್ನು ಉಲ್ಲೇಖ ಮಾಡಿದ್ದರು.

ಅರ್ಜಿದಾರರ ಪರವಾಗಿ ವಾದಿಸಿದ್ದ ಬಹುತೇಕ ವಕೀಲರು ರಾಜ್ಯಪಾಲರ ಕ್ರಮ ಸರಿಯಾಗಿದೆ ಎಂದೇ ವಾದಿಸಿದ್ದರು. ಆದರೆ ಸಿಎಂ ಪರವಾಗಿ ವಾದಿಸಿದ್ದ ಅಭಿಷೇಕ್‌ ಮನುಸಿಂಘ್ವಿ , ಶಶಿಕಿರಣ್‌ ಶೆಟ್ಟಿ ಅವರುಗಳು ರಾಜ್ಯಪಾಲರ ಕ್ರಮವನ್ನು ಸಂವಿಧಾನ ಬಾಹಿರ ಎಂದು ಆಕ್ಷೇಪಿಸಿದ್ದರು.
ರಾಜ್ಯಪಾಲರ ಕ್ರಮ ಸರಿಯಾಗಿದೆ ಎಂದು ಹೈಕೋರ್ಟ್‌ ಎತ್ತಿ ಹಿಡಿದರೆ ಸಿದ್ದರಾಮಯ್ಯನವರಿಗೆ ಕಾನೂನಿನ ಕುಣಿಕೆ ಬಿಗಿಯಾಗಲಿದೆ.

ತಕ್ಷಣವೇ ತನಿಖಾ ಸಂಸ್ಥೆಗಳು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕಾಗುತ್ತದೆ. ಆಗ ಸುಪ್ರೀಂಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತರಬೇಕು ಇಲ್ಲವೇ ಕಾನೂನು ಎದುರಿಸಬೇಕಾಗುತ್ತದೆ. ಹೀಗೆ ಹೈಕೋರ್ಟ್‌ ನೀಡಲಿರುವ ತೀರ್ಪು ಸಿದ್ದರಾಮಯ್ಯನವರ ರಾಜಕೀಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ.

RELATED ARTICLES

Latest News