ಬೆಂಗಳೂರು, ಜ.12- ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಶೀತಗಾಳಿಯಿಂದ ಚಳಿಯ ಅನುಭವ ಹೆಚ್ಚಾಗಿದ್ದರೆ, ರಾಜ್ಯದಲ್ಲಿ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಮೋಡ ಕವಿದ ವಾತಾವರಣ ಆಗಾಗ್ಗೆ ಬೀಸುವ ತಂಪಾದ ಗಾಳಿಯಿಂದ ಹಗಲು-ರಾತ್ರಿ ಚಳಿ ಎನ್ನದೇ ಕಾಡುತ್ತಿದೆ. ಇದರಿಂದ ಜನರು ತತ್ತರಿಸುವಂತಾಗಿದೆ. ಆದರೆ, ಕುಸಿದಿದ್ದ ಕನಿಷ್ಠ ತಾಪಮಾನದಲ್ಲಿ ಹೆಚ್ಚಳವಾಗಿದೆ.
ಇನ್ನೂ ಮೂರು ದಿನಗಳ ಕಾಲ ಮೋಡ ಕವಿದ ವಾತಾವರಣ ಕಂಡುಬರುವ ಸಾಧ್ಯತೆ ಇದ್ದು, ಜನರು ಮುನ್ನೆಚ್ಚರಿಕೆ ಕ್ರಮವಾಗಿ ಬೆಚ್ಚಗಿನ ಉಡುಪುಗಳನ್ನು ಧರಿಸುವಂತೆ ವೈದ್ಯರು ಹಾಗೂ ಹವಾಮಾನ ತಜ್ಞರು ಸಲಹೆ ಮಾಡಿದ್ದಾರೆ.
ಕಳೆದ ಶನಿವಾರದಿಂದ ಅಲ್ಲಲ್ಲಿ ತುಂತುರು ಮಳೆ ಬಿದ್ದಿದೆ. ಕೆಲವೆಡೆ ಹಗುರವಾದ ಮಳೆಯೂ ಆಗಿದೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಗಳಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಣ ಹವೆ ಮುಂದುವರೆಯಲಿದೆ. ಶೀತಗಾಳಿ ಹಾಗೂ ಚಳಿ ಕಂಡುಬರಲಿದೆ. ಅಲ್ಲಲ್ಲಿ ಬೆಳಗಿನ ವೇಳೆ ಮಂಜು ಕವಿಯುವ ಸಾಧ್ಯತೆಗಳಿವೆ. ಉತ್ತರ ಒಳನಾಡು ಹೊರತು ಪಡಿಸಿ ರಾಜ್ಯದ ಉಳಿದೆಡೆ ಚದುರಿದಂತೆ ಅಲ್ಲಲ್ಲಿ ತುಂತುರು ಮಳೆಯಾಗುವ ಮುನ್ಸೂಚನೆಗಳಿವೆ.
ಮೋಡ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಬಿಸಿಲಿನ ವಾತಾವರಣವಿಲ್ಲದೆ, ಗರಿಷ್ಠ ತಾಪಮಾನದಲ್ಲಿ ಇಳಿಕೆಯಾಗಿದೆ. ಆದರೆ, ಕನಿಷ್ಠ ತಾಪಮಾನದಲ್ಲಿ ಗಣನೀಯ ಏರಿಕೆಯಾಗಿರುವುದು ಕಂಡುಬಂದಿದೆ. ತೀವ್ರವಾದ ಚಳಿ ಇರುತ್ತಿದ್ದ ಬೀದರ್‌ನಲ್ಲಿ 13.4 ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 20 ಡಿ.ಸೆ.ಗಿಂತ ಹೆಚ್ಚಿದೆ.ರಾಜ್ಯದ ನಾಲ್ಕೈದು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 15-18 ಡಿ.ಸೆ.ನಷ್ಟು ದಾಖಲಾಗಿರುವುದು ಕಂಡುಬಂದಿದೆ.
ಶಿವಮೊಗ್ಗ-13.6 ಡಿ.ಸೆ., ದಾವಣಗೆರೆ, ಧಾರವಾಡ-14.8 ಡಿ.ಸೆ., ಚಿತ್ರದುರ್ಗ, ಹಾಸನ- 19.9 ಡಿ.ಸೆ., ಬೆಂಗಳೂರು ನಗರದಲ್ಲಿ 16.5 ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಸರಾಸರಿ ಮಕರ ಸಂಕ್ರಾಂತಿ ಹಬ್ಬದವರೆಗೂ ಮಾಗಿ ಚಳಿಯ ವಾತಾವರಣ ಇದೆ ರೀತಿ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿವೆ.
