Monday, January 12, 2026
Homeರಾಜ್ಯಚಿನ್ನ-ಬೆಳ್ಳಿ ದರ ನಾಗಾಲೋಟ

ಚಿನ್ನ-ಬೆಳ್ಳಿ ದರ ನಾಗಾಲೋಟ

Gold and silver prices soar

ಬೆಂಗಳೂರು,ಜ.12-ಅಮೂಲ್ಯ ಲೋಹವೆಂದೇ ಪರಿಗಣಿಸುವ ಚಿನ್ನ-ಬೆಳ್ಳಿ ಬೆಲೆ ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದು, ಇಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿವೆ. ಶುದ್ದ ಚಿನ್ನ ಪ್ರತಿ ಗ್ರಾಂಗೆ 14 ಸಾವಿರದ ಗಡಿದಾಟಿದ್ದರೆ, ಬೆಳ್ಳಿ ಪ್ರತಿ ಕೆ.ಜಿಗೆ 2,70,000 ರೂ.ಗೆ ತಲುಪಿದ್ದು ಹೊಸ ದಾಖಲೆ ನಿರ್ಮಿಸಿದೆ. ಡಿಸೆಂಬರ್‌ನಿಂದಲೂ ಏರುಗತಿಯಲ್ಲಿದ್ದ ಚಿನ್ನಬೆಳ್ಳಿ ದರದಲ್ಲಿ ಜನವರಿ ಮೊದಲ ವಾರದಲ್ಲಿ ಏರಿಳಿತ ಕಂಡರೂ 2ನೇ ವಾರದಲ್ಲಿ ಮತ್ತೆ ಏರಿಕೆಯಾಗಿತ್ತು. ಆಭರಣ ಪ್ರಿಯರಿಗೆ ನಿರಾಸೆಯಾಗಿದೆ .

24 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 169 ರೂ. ಏರಿಕೆಯಾಗಿದ್ದು, 14,215 ರೂ.ಗೆ ತಲುಪಿದೆ. 22 ಕ್ಯಾರೆಟ್‌ನ ಪ್ರತಿ ಗ್ರಾಂ ಚಿನ್ನಕ್ಕೆ 155 ರೂ. ಏರಿಕೆಯಾಗಿದ್ದು, 13,030 ರೂ.ಗೆ ತಲುಪಿದೆ. ಅದೇ ರೀತಿ 18 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 127 ರೂ. ಏರಿಕೆಯಾಗಿದ್ದು, 10,661 ರೂ.ಗೆ ತಲುಪಿದೆ.

ಶುಕ್ರವಾರ, ಶನಿವಾರ ನಿರಂತರ ಏರಿಕೆಯಾಗಿದ್ದ ಚಿನ್ನದ ದರವು ನಿನ್ನೆ ಸ್ಥಿರವಾಗಿತ್ತು. ಇಂದು ಮತ್ತೆ ಹೆಚ್ಚಳವಾಗಿದೆ. ಜ.6ರಿಂದಲೂ ಏರಿಳಿತವಾಗುತ್ತಿದ್ದರೂ ನಿರಂತರ ಏರಿಕೆಯಾಗಿ ಅಲ್ಪ ಪ್ರಮಾಣದಲ್ಲಿ ಮಾತ್ರ ಇಳಿಕೆಯಾಗುತ್ತಿರುವುದು ಮಾರುಕಟ್ಟೆ ದರಗಳನ್ನು ಗಮನಿಸಿದಾಗ ಕಂಡುಬರುತ್ತದೆ.

ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಶುದ್ಧ ಚಿನ್ನ 1 ಗ್ರಾಂ.ಗೆ ಸಾವಿರ ರೂ.ಗೂ ಹೆಚ್ಚು ಏರಿಕೆಯಾಗಿರುವುದು ಕಂಡುಬಂದಿದೆ. ಇನ್ನು ಬೆಳ್ಳಿ ದರವು ಏರಿಕೆಯಲ್ಲಿ ಚಿನ್ನಕ್ಕಿಂತಲೂ ವೇಗದಲ್ಲಿ ಸಾಗುತ್ತಿದೆ.

ಶನಿವಾರವಷ್ಟೇ ಪ್ರತಿ ಕೆಜಿ ಬೆಳ್ಳಿಗೆ 11 ಸಾವಿರ ರೂ. ಹೆಚ್ಚಳವಾಗಿತ್ತು. ನಿನ್ನೆ ಸ್ಥಿರವಾಗಿದ್ದ ದರವು ಇಂದು 10 ಸಾವಿರ ರೂ.ನಷ್ಟು ಏರಿಕೆ ಕಂಡಿದೆ. ಪ್ರತಿ ಕೆ.ಜಿ ಬೆಳ್ಳಿ ದರ 2,70, 000 ರೂ. ತಲುಪಿದೆ. ಪ್ರತಿ ಗ್ರಾಂ ಬೆಳ್ಳಿಗೆ 10 ರೂ. ಏರಿಕೆಯಾಗಿದ್ದು, ಪ್ರತಿ ಗ್ರಾಂ ಬೆಳ್ಳಿಗೆ 270 ರೂ. ಆಗಿದೆ.

ಜಾಗತಿಕವಾಗಿ ಉಂಟಾಗುತ್ತಿರುವ ರಾಜಕೀಯ ವಿದ್ಯಮಾನಗಳು, ವಿದೇಶಿ ವ್ಯವಹಾರದಲ್ಲಾಗುತ್ತಿರುವ ವ್ಯತ್ಯಾಸಗಳು, ವಿವಿಧ ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿಸುತ್ತಿರುವುದು , ಹೂಡಿಕೆದಾರರು ಚಿನ್ನಬೆಳ್ಳಿ ಮೇಲೆ ಹೆಚ್ಚು ಅವಲಂಬಿತವಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದು ವ್ಯಾಖ್ಯಾನಿಸಲಾಗುತ್ತಿದೆ.

ವಿದ್ಯುತ್‌ಚಾಲಿತ ವಾಹನಗಳಿಗೆ ಬೆಳ್ಳಿಯನ್ನು ಬಳಕೆ ಮಾಡುವುದು ಹಾಗೂ ಚಿನ್ನ ಲೇಪಿತ ಬೆಳ್ಳಿ ಆಭರಣಗಳ ಬೇಡಿಕೆ ಹೆಚ್ಚಾಗಿರುವುದು ಬೆಳ್ಳಿಯ ಬೆಲೆ ನಿರಂತರ ಏರಿಕೆಗೆ ಕಾರಣ ಎಂಬುದು ವರ್ತಕರ ಅಭಿಪ್ರಾಯವಾಗಿದೆ. ಚಿನ್ನದ ಆಭರಣಗಳ ಬೆಲೆ ಗಗನಮುಖಿಯಾಗಿ ಸಾಮಾನ್ಯ ಗ್ರಾಹಕರ ಕೈಗೆಟುಕದ ರೀತಿಯಲ್ಲಿ ಆಗಿರುವುದರಿಂದ ಸಾಮಾನ್ಯ ಜನರು ಚಿನ್ನಲೇಪಿತ ಬೆಳ್ಳಿ ಆಭರಣಗಳ ಮೊರೆ ಹೋಗಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಸದ್ಯಕ್ಕೆ ಚಿನಿವಾರಪೇಟೆಯಲ್ಲಿ ಬೆಳ್ಳಿ ಮತ್ತು ಚಿನ್ನದ ದರಗಳು ಇಳಿಕೆಯಾಗುವ ಸಾಧ್ಯತೆಗಳು ವಿರಳ ಎಂದೇ ಬಿಂಬಿಸಲಾಗುತ್ತಿದೆ.

RELATED ARTICLES

Latest News