Thursday, September 19, 2024
Homeರಾಜ್ಯಬಳ್ಳಾರಿ ಸಂಸದ ಇ.ತುಕಾರಾಂ ಸ್ಥಾನಕ್ಕೆ ಕುತ್ತು

ಬಳ್ಳಾರಿ ಸಂಸದ ಇ.ತುಕಾರಾಂ ಸ್ಥಾನಕ್ಕೆ ಕುತ್ತು

E.Tukaram

ಬೆಂಗಳೂರು,ಸೆ.13- ವಾಲೀಕಿ ನಿಗಮದಲ್ಲಿ ನಡೆದ ಅಕ್ರಮದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹಣ ಬಳಸಿಕೊಳ್ಳಲಾಗಿದೆ ಎಂಬುದು ಇಡಿ ತನಿಖೆಯಿಂದ ಬಹಿರಂಗವಾಗಿರುವುದರಿಂದ ಸಂಸದ ಇ.ತುಕಾರಾಂ ಸ್ಥಾನಕ್ಕೆ ಕುತ್ತು ಬಂದಿದೆ.ಜಾರಿ ನಿರ್ದೇಶನಾಲಯ ನಡೆಸಿರುವ ತನಿಖೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗೇಂದ್ರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತುಕಾರಾಂ ಗೆಲುವಿಗೆ ವಾಲೀಕಿ ನಿಗಮದ 21 ಕೋಟಿ ಹಣವನ್ನು ಬಳಸಿಕೊಂಡಿದ್ದರು ಎಂಬುದನ್ನು ಪತ್ತೆ ಹಚ್ಚಿದೆ.

ಇದೀಗ ಬಿಜೆಪಿ ಇದನ್ನೇ ಅಸ್ತ್ರ ಮಾಡಿಕೊಂಡು ಸಂಸದ ತುಕಾರಾಂ ಅವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಚುನಾವಣಾ ಆಯೋಗಕ್ಕೆ ಹಾಗೂ ಲೋಕಸಭೆಯ ಸ್ಪೀಕರ್ಗೆ ದೂರು ನೀಡಲು ಮುಂದಾಗಿದೆ.ಮೂರು ದಿನಗಳ ಹಿಂದೆ 82ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದ ಇಡಿ ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ 21 ಕೋಟಿ ಹಣವನ್ನು ನಿಗಮದಿಂದ ಬಳಕೆ ಮಾಡಲಾಗಿದೆ.

ನಾಗೇಂದ್ರ ಸೂಚನೆ ಮೇರೆಗೆ ಬಾರ್ಗಳು, ವೈನ್ಶಾಪ್ಗಳಿಗೆ ಹಣ ರವಾನೆ ಮಾಡಲಾಗಿದ್ದು, ಪ್ರತಿ ಬೂತ್ಗಳಿಗೆ 2 ಸಾವಿರದಿಂದ 5 ಸಾವಿರ ಹಣ ನೀಡಲಾಗಿದೆ ಎಂಬುದನ್ನು ಉಲ್ಲೇಖ ಮಾಡಿತ್ತು.ಮೊದಲ ಹಂತದಲ್ಲಿ ಬಿಜೆಪಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದು, ತಕ್ಷಣವೇ ಬಳ್ಳಾರಿ ಸಂಸದರೂ ಆಗಿರುವ ತುಕಾರಾಂ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಲಿದೆ.

ಇಡಿ ಸಲ್ಲಿಸಿರುವ ಚಾರ್ಜ್ಶೀಟ್ ಅನ್ನೇ ಚುನಾವಣಾ ಆಯೋಗಕ್ಕೂ ನೀಡಲಿದ್ದು, ಭ್ರಷ್ಟಾಚಾರದ ಮೂಲಕ ಗೆದ್ದಿರುವ ತುಕಾರಾಂ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಬಿ.ಶ್ರೀರಾಮುಲು ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲು ಮನವಿ ಮಾಡಲಿದೆ ಎಂದು ಗೊತ್ತಾಗಿದೆ.

ಬಳಿಕ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಿರುವ ಬಿಜೆಪಿ ಅಕ್ರಮ ಹಣದ ಮೂಲಕ ಗೆದ್ದಿರುವ ತುಕಾರಾಂ ಸದಸ್ಯತ್ವವನ್ನು ತಕ್ಷಣವೇ ತಡೆಹಿಡಿಯಬೇಕು. ಈ ಹಿಂದೆ ಆಯೋಗ ಇಂತಹ ಪ್ರಕರಣದಲ್ಲಿ ಕೈಗೊಂಡಿರುವ ಕೆಲವು ತೀರ್ಮಾನಗಳನ್ನು ಆಯೋಗದ ಮುಖ್ಯ ಆಯುಕ್ತರಿಗೆ ಮನವರಿಕೆ ಮಾಡಲಿದೆ. ಬಳಿಕ ಲೋಕಸಭೆಯ ಸ್ಪೀಕರ್ ಓಂಬಿರ್ಲಾ ಅವರಿಗೂ ತುಕಾರಾಂ ಸದಸ್ಯತ್ವವನ್ನು ತಡೆಹಿಡಿಯುವಂತೆ ದೂರು ಕೊಡಲಿದೆ.

ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಲ್ಲಿ ಟಿಎಂಸಿಯ ಸದಸ್ಯೆ ಮಹುವಾ ಮೊಯಿತ್ರಾ ಅವರ ಸದಸ್ಯತ್ವವನ್ನು ಈ ಹಿಂದೆ ಅನರ್ಹಗೊಳಿಸಲಾಗಿತ್ತು. ಈಗ ತುಕಾರಾಂ ಅವರ ಸದಸ್ಯತ್ವವನ್ನು ಅನರ್ಹ ಮಾಡಬೇಕೆಂದು ಬಿಜೆಪಿ ದೂರು ಕೊಡಲಿದೆ.

ಕರ್ನಾಟಕ ಮಹರ್ಷಿ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಒಟ್ಟು 192 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಹಿಂದುಳಿದ ವರ್ಗಗಳ ಸಚಿವರಾಗಿದ್ದ ಬಿ.ನಾಗೇಂದ್ರ ಸೂಚನೆ ಮೇರೆಗೆ ನಿಗಮದ ಒಟ್ಟು 87 ಕೋಟಿ ರೂ. ಹಣವನ್ನು ಲೋಕಸಭಾ ಚುನಾವಣೆ ಹಾಗೂ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಇಡಿ ಪತ್ತೆ ಮಾಡಿದೆ.

RELATED ARTICLES

Latest News