ಬೆಂಗಳೂರು,ಸೆ.14- ಆಪರೇಷನ್ ಕಮಲಕ್ಕೆ ಒಳಗಾಗಿ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರವನ್ನು ಪತನಗೊಳಿಸಿ, ಬಿಜೆಪಿ ಸೇರ್ಪಡೆಯಾಗಿದ್ದ ಆಗಿನ 17 ಮಂದಿ ಶಾಸಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ 17 ಎ ಅಡಿ ತನಿಖೆಗೆ ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.
ಜನಾಧಿಕಾರ ಸಂಘರ್ಷ ಪರಿಷತ್ನ ಸಹ ಅಧ್ಯಕ್ಷ ಆದರ್ಶ ಅಯ್ಯರ್ರವರು ಸೆ.11 ರಂದು ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದು, 17 ಮಂದಿ ಶಾಸಕರ ವಿರುದ್ಧ ಹೆಚ್ಚುವರಿ ತನಿಖೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.ವಿಳಂಬವಾಗಿ ದೂರು ನೀಡುತ್ತಿರುವುದಕ್ಕೂ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. 2019 ರಲ್ಲಿ ಕಾಂಗ್ರೆಸ್ನ 14, ಜೆಡಿಎಸ್ನ 3 ಶಾಸಕರು ಮೂಲಪಕ್ಷಗಳನ್ನು ತೊರೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಇದರಿಂದಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಮಿಶ್ರ ಸರ್ಕಾರ ಪತನವಾಗಿತ್ತು.
ಆ ಸಂದರ್ಭದಲ್ಲಿ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ತೊರೆದು ಹೋಗಿದ್ದ ಬಹುತೇಕರು ವಿಧಾನಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಕೆಲವರು ಪುನರ್ ಆಯ್ಕೆಯಾಗಿದ್ದರು. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು.
ಆಪರೇಷನ್ ಕಮಲಕ್ಕೆ ಒಳಗಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಲಯ ಆದೇಶ ನೀಡಿತ್ತು. ತೀರ್ಪಿನ ಪ್ಯಾರ 27 ರಲ್ಲಿ ಪಕ್ಷಾಂತರ ಶಾಸಕರು ಯಡಿಯೂರಪ್ಪ ಅವರಿಗೆ ಅನುಚಿತ ಅನುಕೂಲ ಕಲ್ಪಿಸಿದ್ದಾರೆ. ಪಕ್ಷಗಳು ನೀಡಿದ ವಿಪ್ ಅನ್ನು ಉಲ್ಲಂಘಿಸಿದ್ದಾರೆ. ಶಾಸಕಾಂಗ ಸಭೆಗೆ ಗೈರುಹಾಜರಾಗಿದ್ದಾರೆ ಎಂಬೆಲ್ಲಾ ಅಂಶಗಳನ್ನು ಪ್ರಸ್ತಾಪಿಸಿತ್ತು.
ಆದರೆ ಶಾಸಕರು ಚುನಾವಣೆಯಲ್ಲಿ ಮರು ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಇದನ್ನು ಪ್ರಶ್ನಿಸಿರುವ ಆದರ್ಶ ಅಯ್ಯರ್ ಅವರು ಕುಕೃತ್ಯದ ಹಿಂದೆ ನಡೆದಿರುವ ಭ್ರಷ್ಟ ಕ್ರಮಗಳ ವಿರುದ್ಧ ತನಿಖೆಯಾಗಬೇಕು. ಇಲ್ಲವಾದರೆ ಕಾನೂನಿನ ಮೂಲ ಉದ್ದೇಶ ಉಳಿಯುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಕೋವಿಡ್ನಿಂದಾಗಿ ದೂರು ನೀಡಲು ವಿಳಂಬವಾಯಿತು. ಅನಂತರ ಚುನಾವಣೆಗಳು ಎದುರಾದವು. ಹೀಗಾಗಿ 17 ಮಂದಿ ಪಕ್ಷಾಂತರಿಗಳ ವಿರುದ್ಧ ತನಿಖೆಗೆ ಅರ್ಜಿ ಸಲ್ಲಿಸಲು ತಡವಾಗಿದೆ ಎಂದು ಆದರ್ಶ ಅಯ್ಯರ್ ವಿಧಾನಸಭಾಧ್ಯಕ್ಷರಿಗೆ ನೀಡಿರುವ ತಮ ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ವಿಧಾನಸಭಾಧ್ಯಕ್ಷರಿಗೆ ದೂರು ನೀಡಲಾಗಿತ್ತು. ರಾಜ್ಯಪಾಲರ ಅನುಮತಿ ಪಡೆಯುವಂತೆ ಸೂಚನೆ ನೀಡಿ ಸ್ಪೀಕರ್ರವರು ಅರ್ಜಿಯನ್ನು ತಿರಸ್ಕರಿಸಿದ್ದರು. ಈಗ ದೂರು ಅರ್ಜಿ ಸ್ಪೀಕರ್ ಅವರ ಅಂಗಳದಲ್ಲಿದೆ. ಆಪರೇಷನ್ ಕಮಲದಿಂದ ಪಕ್ಷ ತೊರೆದವರ ಪೈಕಿ ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಬಿಜೆಪಿಯಿಂದ ಶಾಸಕರಾಗಿದ್ದರು. ಕಾಂಗ್ರೆಸ್ಸಿಗರ ಜೊತೆ ನಿಕಟ ಬಾಂಧವ್ಯ ಹೊಂದಿದ್ದಾರೆ.
ಡಾ.ಸುಧಾಕರ್ ಸಂಸದರಾಗಿದ್ದಾರೆ. ಉಳಿದಂತೆ ಕೆಲವರು ಶಾಸಕರಾಗಿದ್ದರೆ, ಇನ್ನೂ ಕೆಲವರು ಸೋಲು ಕಂಡಿದ್ದಾರೆ. ಈಗ ಪಕ್ಷಾಂತರಿಗಳಿಗೆ ಕಾನೂನಿನ ಸಂಕಷ್ಟ ಎದುರಾಗುವ ಆತಂಕ ಶುರುವಾಗಿದೆ.