Friday, September 20, 2024
Homeರಾಜ್ಯಬಿಜೆಪಿಯವರು ಸತ್ಯ ಶೋಧನೆ ವರದಿ ನೀಡಿದರೆ ಪೊಲೀಸರಿಗೂ ಅನುಕೂಲವಾಗುತ್ತೆ : ಪರಮೇಶ್ವರ್ ಲೇವಡಿ

ಬಿಜೆಪಿಯವರು ಸತ್ಯ ಶೋಧನೆ ವರದಿ ನೀಡಿದರೆ ಪೊಲೀಸರಿಗೂ ಅನುಕೂಲವಾಗುತ್ತೆ : ಪರಮೇಶ್ವರ್ ಲೇವಡಿ

Nagamangala Riot BJP's fact-finding report

ಬೆಂಗಳೂರು,ಸೆ.14- ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಗಲಭೆ ಪ್ರಕರಣದಲ್ಲಿ ಬಿಜೆಪಿಯವರು ಸತ್ಯ ಶೋಧನೆ ಮಾಡಿ ವರದಿ ನೀಡಿದರೆ ಪೊಲೀಸರಿಗೂ ಸುಲಭವಾಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾಗಮಂಗಲ ಶಾಂತಿಯುತವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು, ಹೆಚ್ಚುವರಿ ಭದ್ರತೆ ಹಾಕಲಾಗಿದೆ. ಶಾಂತಿ ಸಭೆ ಕೂಡ ನಡೆಯುತ್ತಿದೆ ಎಂದು ಹೇಳಿದರು.

ಪೊಲೀಸರು ದಾಖಲಿಸಿರುವ ಪ್ರಕರಣದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸುವುದು ಅಪ್ರಸ್ತುತ. ಕಾನೂನು ಪ್ರಕಾರ ಏನು ಮಾಡಬೇಕು ಅದನ್ನು ಮಾಡುತ್ತೇವೆ. ಬೇಕಾದ ರೀತಿಯಲ್ಲೆಲ್ಲಾ ನಡೆದುಕೊಳ್ಳಲು ಆಗುವುದಿಲ್ಲ. ಪ್ರಕರಣ ದಾಖಲಿಸಿರುವುದಕ್ಕೆ ಅನುಮಾನ ಪಡುವುದು ಅರ್ಥಹೀನ ಎಂದರು.

ಬಿಜೆಪಿಯವರು ಸತ್ಯಶೋಧನೆ ಮಾಡಿರುವುದಕ್ಕೆ ಆಕ್ಷೇಪವಿಲ್ಲ. ಅವರು ಸತ್ಯಶೋಧನೆ ಮಾಡಲಿ. ಅವರು ನೀಡುವ ವರದಿಯಲ್ಲಿ ಸತ್ಯ ಇದ್ದರೆ ಗಮನಿಸುತ್ತೇವೆ. ನಮ ಪೊಲೀಸರಿಗೂ ಸುಲಭವಾಗುತ್ತದೆ ಎಂದು ಹೇಳಿದರು.

ಯಾದಗಿರಿಯಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ನೀಡಿದ ಹಿನ್ನೆಲೆಯಲ್ಲಿ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪ್ರಕರಣದ ಕುರಿತು ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ.

ದೂರು ನೀಡಿದ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ. ಒಟ್ಟು 500 ಜನ ಇರುವ ಗ್ರಾಮದಲ್ಲಿ ದಲಿತ ಸಮುದಾಯದ ಸಂಖ್ಯೆ ಹೆಚ್ಚಿದೆ. ದಲಿತರ ಮಕ್ಕಳಿಗೆ ಪುಸ್ತಕ ತೆಗೆದುಕೊಳ್ಳಲು ಬಿಟ್ಟಿಲ್ಲ, ಊರಿನಲ್ಲಿ ನೀರು ಬಳಸಲು ಆಗುತ್ತಿಲ್ಲ ಎಂಬೆಲ್ಲಾ ದೂರುಗಳಿವೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ ಎಂದರು.

RELATED ARTICLES

Latest News