ಬೆಂಗಳೂರು, ಸೆ.14- ಜೀವಬೆದರಿಕೆ, ಜಾತಿನಿಂದನೆ, 30ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿವೆ.
ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಎಂಬುವರು ಒಂದು ದೂರು ನೀಡಿದರೆ, ವೇಲುನಾಯ್ಕರ್ ಎಂಬುವರು ಮತ್ತೊಂದು ದೂರು ನೀಡಿದ್ದಾರೆ.
ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಮತ್ತು ಅವರ ಆಪ್ತ ವಸಂತ್‌ಕುಮಾರ್ ಅವರು 30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿ ಜೀವಬೆದರಿಕೆ ಹಾಕಿದ್ದಾರೆ, ಅವರುಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ಚೆಲುವರಾಜ್ ಅವರು ದೂರು ನೀಡಿದ್ದಾರೆ.
ನಿನ್ನೆ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿ ಮಾಡಿದ ಚೆಲುವರಾಜ್ ಅವರು ದೂರು ನೀಡಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅವರು ಕೇಳಿದಷ್ಟು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಗುತ್ತಿಗೆ ರದ್ದುಗೊಳಿಸುವ ಬೆದರಿಕೆ ಒಡ್ಡಿ, ಕುಟುಂಬದವರಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಅಳಲುತೋಡಿಕೊಂಡಿದ್ದಾರೆ.
ನಾನು ಈ ಹಿಂದೆ ಪೌರಕಾರ್ಮಿಕನಾಗಿ, ಲಾರಿ ಕ್ಲೀನರ್, ಚಾಲಕನಾಗಿ ಕೆಲಸ ಮಾಡಿದ್ದು, ಈಗ ಗುತ್ತಿಗೆದಾರನಾಗಿದ್ದೇನೆ. ಶಾಸಕರು ಹಾಗೂ ಅವರ ಆಪ್ತ ಸಹಾಯಕ ಕುಮಾರ್ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮೂರು ದಿನಗಳ ಹಿಂದೆ ಮುನಿರತ್ನ ಅವರ ಆಪ್ತ ವಸಂತ್ ಕುಮಾರ್ ಎಂಬಾತ ಪೆಟ್ರೋಲ್ ಬಂಕ್‌ವೊಂದರ ಬಳಿ ನನ್ನನ್ನು ಭೇಟಿ ಮಾಡಿ, ನೀನು ಶಾಸಕರಿಗೆ ಹಣ ಕೊಡದಿದ್ದರೆ ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಬರಲಿದೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದರು.
ಶಾಸಕರು ಜಾತಿನಿಂದನೆ ಮಾಡಿದ್ದಾರೆ, ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ವೇಲುನಾಯ್ಕರ್ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಎರಡು ದೂರುಗಳನ್ನು ದಾಖಲಿಸಿಕೊಂಡಿರುವ ವೈಯಾಲಿಕಾವಲ್ ಠಾಣೆ ಪೊಲೀಸರು ಶಾಸಕ ಮುನಿರತ್ನ ಅವರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶಾಸಕ ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ದಲಿತ ಮತ್ತು ಒಕ್ಕಲಿಗ ಸಮುದಾಯಗಳ ಪದಗಳನ್ನು ಬಳಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸ್ನಾತಕೋತರ ಮತ್ತು ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರುನೀಡಿದೆ.
ಈ ದೂರನ್ನು ಸಹ ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ.ಜೀವ ಬೆದರಿಕೆ ಪ್ರಕರಣದಲ್ಲಿ ಶಾಸಕ ಮುನಿರತ್ನ, ಆಪ್ತ ಸಹಾಯಕ ವಿಜಯಕುಮಾರ್, ಸೆಕ್ಯೂರಿಟಿ ಅಭಿಷೇಕ್ ಹಾಗೂ ವಸಂತ್‌ಕುಮಾರ್ ಹೆಸರುಗಳನ್ನು ಉಲ್ಲೇಖಿಸಲಾಗಿದೆ.