ಬೆಂಗಳೂರು,ಸೆ.15- ಯಾರ್ ಏನೇ ಮಾಡಿದರೂ ಪರಪ್ಪನ ಅಗ್ರಹಾರ ಜೈಲಿನ ಸ್ಥಿತಿ ಸರಿ ಹೋಗಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ.ನಿನ್ನೆ ಸಂಜೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಮತ್ತವರ ತಂಡ ಪರಪ್ಪನ ಅಗ್ರಹಾರದ ಜೈಲಿನ ಮೇಲೆ ನಡೆಸಿದ ದಿಢೀರ್ ದಾಳಿ ವೇಳೆ ರೌಡಿ ವಿಲ್ಸನ್ ಗಾರ್ಡನ್ ನಾಗ ಮತ್ತಿತರರ ಬ್ಯಾರಕ್ಗಳಲ್ಲಿ 15 ಮೊಬೈಲ್ ಫೋನ್ಗಳು, ಚಾರ್ಜರ್ಗಳು, ಪೆನ್ ಡ್ರೈವ್ಗಳು, ಇಯರ್ಫೋನ್ಗಳು, ಎಲೆಕ್ಟ್ರಾನಿಕ್ ಸ್ಟೌವ್ ಮತ್ತಿತರ ವಸ್ತುಗಳು ಪತ್ತೆಯಾಗಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಿತ್ರನಟ ದರ್ಶನ್, ರೌಡಿ ವಿಲ್ಸನ್ ಗಾರ್ಡನ್ ನಾಗ ಮತ್ತಿತರ ಜೊತೆಗೆ ಜೈಲಿನಲ್ಲಿ ಕುರ್ಚಿ ಮೇಲೆ ಕುಳಿತು ಸಿಗರೇಟ್ ಸೇದುತ್ತಿದ್ದ ಪೋಟೋಗಳು ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನ ಸ್ಥಿತಿಗತಿ ಬಗ್ಗೆ ಕಳವಳ ಹುಟ್ಟಿಕೊಂಡಿತ್ತು.
ತಕ್ಷಣ ಎಚ್ಚೆತ್ತುಕೊಂಡ ಸರ್ಕಾರ ಪರಪ್ಪನ ಅಗ್ರಹಾರ ಬಂಧಿಖಾನೆಯ 9 ಅಧಿಕಾರಿಗಳನ್ನು ಅಮಾನತು ಮಾಡಿ 30ಕ್ಕೂ ಹೆಚ್ಚು ಸಿಬ್ಬಂದಿ ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿತ್ತು. ನಂತರ ಜೈಲಿನ ಪರಿಸ್ಥಿತಿ ಸರಿ ಹೋಗಬಹುದು ಎಂಬ ಸರ್ಕಾರದ ನಿರೀಕ್ಷೆ ಇದೀಗ ಮತ್ತೆ ಹುಸಿಯಾಗಿದೆ.
ಜೈಲಿನಲ್ಲಿ ರಾಜಾತಿಥ್ಯ, ಮೊಬೈಲ್ ಬಳಕೆ ಕುರಿತಂತೆ ಈಗಾಗಲೇ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.ಜೈಲಿನ ಪರಿಸ್ಥಿತಿ ಕುರಿತಂತೆ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತರು ತನಿಖೆ ನಡೆಸುತ್ತಿದ್ದಾರೆ ಆದರೂ ಜೈಲಿನ ಸ್ಥಿತಿ ಸುಧಾರಿಸದಿರುವುದು ಸರ್ಕಾರಕ್ಕೆ ತಲೆನೋವು ತರಿಸಿದೆ.
ಡಿಸಿಪಿ ಸಾರಾ ಫಾತಿಮಾ, ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ, ಪರಪ್ಪನ ಅಗ್ರಹಾರ ಠಾಣೆಯ ಇನ್‌್ಸಪೆಕ್ಟರ್, ಇತರ ಮೂವರು ಇನ್‌್ಸಪೆಕ್ಟರ್ಗಳು ಸೇರಿದಂತೆ 30 ಪೊಲೀಸರಿದ್ದ ತಂಡ ನಿನ್ನೆ ಸಂಜೆ 6 ರಿಂದ 830ರವರೆಗೆ ನಡೆಸಿದ ದಿಢೀರ್ ದಾಳಿ ವೇಳೆ ಪರಪ್ಪನ ಅಗ್ರಹಾರ ಜೈಲಿನ ಸ್ಥಿತಿ ಇನ್ನು ಸುಧಾರಿಸಿಲ್ಲ ಎನ್ನುವುದಕ್ಕೆ ಅಲ್ಲಿ ಸಿಕ್ಕಿರುವ ವಸ್ತುಗಳೇ ಸಾಕ್ಷಿಯಾಗಿವೆ.
ಚಿತ್ರನಟ ದರ್ಶನ್ ಜೊತೆಗೆ ಕಾಣಿಸಿಕೊಂಡಿದ್ದ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಇನ್ನಿತರ ರೌಡಿಗಳಿರುವ ಬ್ಯಾರಕ್ಗಳ ಮೇಲೆ ದಾಳಿ ನಡೆಸಿದಾಗ ಕೆಲವರ ಬಳಿ ಇದ್ದ 15 ಮೊಬೈಲ್ ಫೋನ್ಗಳು ಮತ್ತಿತರ ಬಹುಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಲಾಗಿದೆ.