Friday, September 20, 2024
Homeಮನರಂಜನೆಮಹಿಳೆಯರ ಸುರಕ್ಷತೆ ಕುರಿತಂತೆ ಕನ್ನಡ ಚಿತ್ರರಂಗದ ಪ್ರಮುಖರ ಮಹತ್ವದ ಸಭೆ

ಮಹಿಳೆಯರ ಸುರಕ್ಷತೆ ಕುರಿತಂತೆ ಕನ್ನಡ ಚಿತ್ರರಂಗದ ಪ್ರಮುಖರ ಮಹತ್ವದ ಸಭೆ

Kannada film industry important meeting on women safety

ಬೆಂಗಳೂರು,ಸೆ.16- ಕೇರಳದ ಚಲನಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಹೇಮಾ ಸಮಿತಿಯ ಮಾದರಿಯಲ್ಲಿ ರಾಜ್ಯದ ಸ್ಯಾಂಡಲ್‌ವುಡ್‌ನಲ್ಲೂ ನ್ಯಾಯಾಂಗ ವಿಚಾರಣಾ ಆಯೋಗ ರಚಿಸಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಇಂದು ಕನ್ನಡ ಚಲನಚಿತ್ರರಂಗದ ಪ್ರಮುಖರ ಸಭೆ ನಡೆಯಿತು.

ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಸುರಕ್ಷತೆ, ಕೆಲಸ ನಿರ್ವಹಣೆಗೆ ಉತ್ತಮ ವಾತಾವರಣ ನಿರ್ಮಾಣ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಹೈಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿಯನ್ನು ರಚಿಸಬೇಕು ಎಂದು ಫಿಲ್‌ ಇಂಡಸ್ಟ್ರಿ ಪಾರ್ಕ್‌ ರೈಟ್ಸ್ ಅಂಡ್‌ ಈಕ್ವಾಲಿಟಿ ಎಂಬ ಸಂಘಟನೆ ಬೇಡಿಕೆ ಮಂಡಿಸಿದೆ.

ಇದಕ್ಕೆ ಚಿತ್ರರಂಗದ ನಟಿ ರಮ್ಯ ಸೇರಿದಂತೆ ಹಲವು ನಟ, ನಟಿಯರು ಕೆಲವು ನಿರ್ದೇಶಕರು ಬೆಂಬಲ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಫೈರ್‌ ಸಮಿತಿಯ ನಿಯೋಗ ಭೇಟಿ ಮಾಡಿ ಸಮಿತಿ ರಚನೆಗೆ ಒತ್ತಾಯ ಮಾಡಿತು. ಅದರ ಬೆನ್ನಲ್ಲೇ ನಿರ್ಮಾಪಕರಾದ ಸಾ.ರಾ.ಗೋವಿಂದು, ಕೆ.ಮಂಜು ಸೇರಿದಂತೆ ಹಲವರು ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿ ಟೂ ಸೇರಿದಂತೆ ಯಾವುದೇ ಸಮಸ್ಯೆಗಳಿಲ್ಲ. ಹೀಗಾಗಿ ಇಲ್ಲಿ ಸಮಿತಿಯ ಅಗತ್ಯ ಇಲ್ಲ ಎಂದು ಪ್ರತಿಪಾದಿಸಿದರು.

ಈ ರೀತಿಯ ಅಭಿಪ್ರಾಯಕ್ಕೆ ತಮ ಸಹಮತ ಇದೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಎನ್‌.ಎಂ.ಸುರೇಶ್‌ಕುಮಾರ್‌ ಹೇಳಿದರು.ಆದರೆ ಚಿತ್ರರಂಗದಲ್ಲಿನ ಒಂದು ಬಣ ಸಮಿತಿ ರಚನೆ ಆಗಲೇಬೇಕು ಎಂದು ಪಟ್ಟು ಹಿಡಿದಿದೆ. ಹೀಗಾಗಿ ಚಿತ್ರರಂಗದ ಅಭಿಪ್ರಾಯ ಸಂಗ್ರಹಿಸಲಿ ಎಂದು ರಾಜ್ಯಸರ್ಕಾರದ ಅಂಗಸಂಸ್ಥೆ ಮಹಿಳಾ ಆಯೋಗ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಇಂದು ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರ ಜೊತೆ ಸಮಾಲೋಚನೆಗೆ ಸಭೆ ಆಯೋಜಿಸಲಾಗಿತ್ತು.ಸಭೆಯಲ್ಲಿ ನಟಿ ತಾರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಮಿತಿ ರಚನೆ ಬಗ್ಗೆ ಸಭೆಯಲ್ಲಿ ಪರ ವಿರೋಧಗಳ ಚರ್ಚೆಯಾಗಿವೆ. ಕೆಲವರು ಸಮಿತಿ ರಚನೆ ಆಗಬೇಕು ಎಂದು ಪ್ರತಿಪಾದಿಸಿದರೆ, ಇನ್ನು ಕೆಲವರು ಅದರ ಅಗತ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ರಾಜ್ಯಸರ್ಕಾರ ಯಾವುದೇ ಕ್ರಮ ಕೈಗೊಂಡರೂ ಅದಕ್ಕೆ ಬದ್ಧ ಎಂಬ ಅಭಿಪ್ರಾಯವನ್ನು ಚಲನಚಿತ್ರ ವಾಣಿಜ್ಯ ಮಂಡಳಿ ವ್ಯಕ್ತಪಡಿಸಿದೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌.ಎಂ.ಸುರೇಶ್‌, ರಾಜ್ಯ ಮಹಿಳಾ ಆಯೋಗದ ಸೂಚನೆ ಮೇರೆಗೆ ಸಭೆ ಕರೆಯಲಾಗಿದ್ದು, ಚರ್ಚೆ ಮಾಡಿ ಅಭಿಪ್ರಾಯ ಕ್ರೂಢೀಕರಿಸಲಿದೆ. ಮಹಿಳಾ ಆಯೋಗದ ಮೂಲಕ ರಾಜ್ಯಸರ್ಕಾರಕ್ಕೆ ಸಭೆಯ ನಿರ್ಣಯಗಳನ್ನು ತಿಳಿಸಲಾಗುವುದು. ಸರ್ಕಾರ ಯಾವುದೇ ನಿರ್ಣಯ ಕೈಗೊಂಡರೂ ಅದಕ್ಕೆ ನಮ ಸಹಮತ ಇದೆ ಎಂದು ಹೇಳಿದರು.

RELATED ARTICLES

Latest News