ಛತ್ತೀಸ್‌ಗಢ,ಸೆ.16- ವಾಮಾಚಾರ ನಡೆಸುತ್ತಾರೆಂಬ ಗುಮಾನಿ ಮೇರೆಗೆ ಗ್ರಾಮಸ್ಥರು ಮನೆಗೆ ನುಗ್ಗಿ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಿರುವ ಘಟನೆ ಸುಕಾ ಜಿಲ್ಲೆಯಲ್ಲಿ ನಡೆದಿದೆ. ಮೃತರಲ್ಲಿ ಮೂವರು ಮಹಿಳೆಯರು ಮತ್ತು ಹೆಡ್ ಕಾನ್‌ಸ್ಟೆಬಲ್ ಕೂಡ ಸೇರಿದ್ದಾರೆ.
ಮೃತರನ್ನು ಮೌಸಂ ಕನ್ನಾ, ಮೌಸಂ ಬುಚ್ಚಾ, ಮೌಸಂ ಬಿರಿ, ಕರ್ಕ ಲಚ್ಚಿ ಮತ್ತು ಮೌಸಂ ಅರ್ಜೋ ಎಂದು ಗುರುತಿಸಲಾಗಿದೆ. ಹಲ್ಲೆ ಮಾಡಿದವರನ್ನು ಅದೇ ಗ್ರಾಮದ ಸವ್ಲಾಮ್ ರಾಜೇಶ್ (21), ಸವ್ಲಾಮ್ ಹಿದಾ, ಕರಮ್ ಸತ್ಯಂ (35), ಕುಂಜಮ್ ಮುಖೇಶ್ (28) ಮತ್ತು ಪೊಡಿಯಮ್ ಎಂಕಾ ಎಂಬ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಗ್ರಾಮದ ಕೆಲವು ಜನರು ವಾಮಾಚಾರವನ್ನು ನಡೆಸುತ್ತಾರೆ, ಇದು ಗ್ರಾಮಸ್ಥರಿಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಗ್ರಾಮದ ಸುಮಾರು 15 ಮಂದಿಯ ತಂಡ ಮನೆಗೆ ನುಗ್ಗಿ ಕುಟುಂಬ ಸದಸ್ಯರೆಲ್ಲರ ಮೇಲೆ ಒಬ್ಬೊಬ್ಬರಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೊಣ್ಣೆ, ಕೊಡಲಿಯಿಂದ ತೀವ್ರವಾಗಿ ಥಳಿಸಲಾಗಿದೆ. ಬಳಿಕ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದಾಗ ಮನೆಯವರು ವಾಮಾಚಾರ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರೆಲ್ಲರೂ ಆರೋಪಿಸಿದ್ದಾರೆ.
ಇದರಿಂದ ಹಳ್ಳಿಯ ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಮತ್ತು ಜನರಿಗೆ ವೈಯಕ್ತಿಕ ಹಾನಿ ಉಂಟಾಗುತ್ತದೆ ಎಂದು ಅವರು ನಂಬಿದ್ದರು. ಸುಕಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಜಿ.ಚವಾಣ್ ತಿಳಿಸಿದ್ದಾರೆ.
ಮಾಟಮಂತ್ರ ಅಥವಾ ವಾಮಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಕುಟುಂಬದ ವಿರುದ್ಧ ಈ ಹಿಂದೆ ಯಾವುದಾದರೂ ವಿವಾದವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಾಟಮಂತ್ರದ ಶಂಕೆಯಲ್ಲಿ ಹತ್ಯೆಗೈದ ಮತ್ತೊಂದು ಘಟನೆ ಸೆಪ್ಟೆಂಬರ್ 13 ರಂದು ಛತ್ತೀಸ್‌ಗಢದ ಬಲೋಡಾ ಬಜಾರ್ ಜಿಲ್ಲೆಯಲ್ಲಿ ನಡೆದಿತ್ತು. ಅಂಬೆಗಾಲಿಡುವ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದರು. ಕುಟುಂಬದ ವ್ಯಕ್ತಿಯೋರ್ವ ಮಾಟಮಂತ್ರ ಮಾಡುತ್ತಿದ್ದಾನೆ ಎಂಬ ಶಂಕೆಯಿಂದ ಕೊಂದು ಹಾಕಲಾಗಿತ್ತು.