Saturday, September 21, 2024
Homeರಾಜ್ಯ5 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಕಲ್ಪ : ಸಿಎಂ

5 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಕಲ್ಪ : ಸಿಎಂ

5000 crore rupees special grant for Kalyana Karnataka development

ಬೆಂಗಳೂರು,ಸೆ.17- ಕಲ್ಯಾಣ ಕರ್ನಾಟಕ ಭಾಗದ ಪ್ರಗತಿಗಾಗಿ 5 ಸಾವಿರ ಕೋಟಿ ರೂ.ಗಳ ವಿಶೇಷ ಅನುದಾನದಲ್ಲಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ಅಭಿವೃದ್ಧಿಯ ನವಕ್ರಾಂತಿಯನ್ನು ನಿರೀಕ್ಷಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ಕಲ್ಪಿಸುವ 371 ಜೆ ವಿಧಿಯ ಜಾರಿಯ ದಶಮಾನೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗೌರವರಕ್ಷೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆಯಾಗಿದ್ದು, ಪ್ರಕೃತಿಯ ಆಶೀರ್ವಾದದಿಂದ ರೈತರಲ್ಲಿ ಸಂತಸ ಮೂಡಿದೆ ಎಂದರು. 2013 ರಿಂದ ಈವರೆಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 19,778 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, 13,229 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈವರೆಗೂ 11,174 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಬಿಡುಗಡೆಯಾದ ಅನುದಾನಕ್ಕೆ ಶೇ.85 ರಷ್ಟು ಮಂಡಳಿ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ ಒಟ್ಟಾರೆ 35,885 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 27,164 ಕಾಮಗಾರಿಗಳು ಪೂರ್ಣಗೊಂಡಿವೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ ಎಂದು ವಿವರಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿತ್ತು. ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಸ್ವಾತಂತ್ರ್ಯದ ಬೆಳಕು ಬಂದಿದ್ದು 1948 ರಲ್ಲಿ. ಅಸಂಖ್ಯಾತರ ಹೋರಾಟ, ತ್ಯಾಗ ಬಲಿದಾನದಿಂದ ಸರ್ದಾರ್ ವಲ್ಲಭಾಬಾಯಿ ಪಟೇಲ್, ಜವಹರಲಾಲ್ ನೆಹರೂ ಅವರ ದೂರದೃಷ್ಟಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗುವಂತಾಯಿತು. ಹೈದರಾಬಾದ್-ಕರ್ನಾಟಕದ ವಿಮೋಚನೆಗಾಗಿ ಹೋರಾಡಿದ ಎಲ್ಲರನ್ನೂ ಸರಿಸುವುದಾಗಿ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗ ಸೂಫಿ ಸಂತರ ಬೀಡಾಗಿದ್ದು, ಕೋಮುಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್-ಕರ್ನಾಟಕ ವಿಮೋಚನಾ ಹೋರಾಟ, ಭಾಷಾವಾರು ಪ್ರಾಂತ್ಯ ರಚನೆ ಹೋರಾಟ, ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಸೇರಿ ನಾಲ್ಕು ಮಹತ್ವದ ಚಳವಳಿಗಳು ನಡೆದಿವೆ. ಈ ಭಾಗವನ್ನು ಬ್ರಿಟಿಷರು ಮತ್ತು ನಿಜಾಮರು ಕಡೆಗಣಿಸಿದ್ದರು. ಹೀಗಾಗಿ ಪ್ರಾದೇಶಿಕ ಅಸಮಾನತೆ ಹೆಚ್ಚಾಗಿತ್ತು. ವಿಶೇಷ ಸ್ಥಾನಮಾನದಿಂದಾಗಿ ಅಭಿವೃದ್ಧಿಯ ವೇಗ ಕಾಣುತ್ತಿದೆ ಎಂದು ಹೇಳಿದರು.

ಪಂಚಖಾತ್ರಿ ಯೋಜನೆಗಳ ಸಮಗ್ರ ವಿವರಣೆ ನೀಡಿದ ಮುಖ್ಯಮಂತ್ರಿಯವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಪ್ರಸಕ್ತ ಬಜೆಟ್ನಲ್ಲಿ 5 ಸಾವಿರ ಕೋಟಿ ರೂ. ಘೋಷಿಸಿ, ಅನುದಾನ ಹಂಚಿಕೆ ಮಾಡಲಾಗಿದೆ. ಅಷ್ಟು ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯ ಹೊಸ ಕ್ರಾಂತಿಯನ್ನು ನಿರೀಕ್ಷಿಸಲಾಗಿದೆ.

ನಂಜುಂಡಪ್ಪ ವರದಿ 2002ರಲ್ಲಿ ಸಲ್ಲಿಕೆಯಾಗಿತ್ತು. ಅನಂತರ ಸಾಮಾಜಿಕ, ಆರ್ಥಿಕ ಹಾಗೂ ಇನ್ನಿತರ ಆಯಾಮಗಳಲ್ಲಿ ಮಹತ್ವದ ಬೆಳವಣಿಗೆಗಳಾಗಿವೆ. ಇದರ ಪರಿಣಾಮಗಳ ಅಧ್ಯಯನಕ್ಕಾಗಿ ಪ್ರೊ.ಗೋವಿಂದರಾವ್ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಆಧಾರದ ಮೇಲೆ ರಾಜ್ಯದಲ್ಲಿ ತಾಲ್ಲೂಕು ಮತ್ತು ಜಿಲ್ಲೆಗಳ ಆರ್ಥಿಕ ಮತ್ತು ಅಸಮಾನತೆಯನ್ನು ವರ್ಗೀಕರಿಸಿ ಹೊಸ ಅಭಿವೃದ್ಧಿ ಸೂಚ್ಯಂಕವನ್ನು ತಯಾರಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 38 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಅದರ ಲಾಭವನ್ನು ಈ ಭಾಗದ ಜನ ಪಡೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷ ಸ್ಥಾನಮಾನಕ್ಕೆ ಹೊರಡಿಸಲಾಗಿರುವ ಆದೇಶದ ಅನುಷ್ಠಾನದ ಮೇಲ್ವಿಚಾರಣೆಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಮೇಲ್ವಿಚಾರಣೆಯಲ್ಲಿ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.

ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತರಲು ಅಕ್ಷರ ಆವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ. 1,008 ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಮಾದರಿ ಶಿಕ್ಷಣ ಆರಂಭಿಸಲಾಗಿದೆ. 36,445 ಮಕ್ಕಳು ಪ್ರವೇಶ ಪಡೆದಿದ್ದು, ಇದಕ್ಕಾಗಿ 1,353 ಅತಿಥಿ ಶಿಕ್ಷಕರು ಹಾಗೂ 892 ಸಹಾಯಕಿಯರನ್ನು ನೇಮಿಸಲಾಗಿದೆ. 872 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಭಾಷಾ ಕಲಿಕೆಯನ್ನು ಪ್ರಾರಂಭಿಸಲಾಗಿದೆ. ಕೌಶಲ್ಯಾಭಿವೃದ್ಧಿ ಕಂಪ್ಯೂಟರ್ ಕಲಿಕಾ ಆಸರೆ ಎಂಬ ವಿಶೇಷ ಅಭ್ಯಾಸವನ್ನು ಒದಗಿಸಲಾಗಿದೆ ಎಂದರು.

RELATED ARTICLES

Latest News