ಬೆಂಗಳೂರು,ಸೆ.17- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಮುಸ್ಲಿಂ ಭಯೋತ್ಪಾದನೆ ಹೆಚ್ಚಾಗುತ್ತದೆ. ಇದಕ್ಕೆ ಅತಿಯಾದ ತುಷ್ಟಿಕರಣ ನೀತಿಯೇ ಕಾರಣ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ ಪೆಟ್ರೋಲ್ ಬಾಂಬ್ ಹಾಕುತ್ತಾರೆ, ಪ್ಯಾಲೆಸ್ತೈನ್ ಧ್ವಜ ಹಿಡ್ಕೊಂಡು ಓಡಾಡುತ್ತಾರೆ, ದೇಶಕ್ಕೆ ದ್ರೋಹ ಬಗೆಯುವವರ ಜೊತೆ ರಾಹುಲ್ ಟೀ ಪಾರ್ಟಿ ಮಾಡುತ್ತಾರೆ. ವಿದೇಶದಲ್ಲಿ ಭಾರತವನ್ನು ತೆಗಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈದ್ ಮಿಲಾದ್ ಹೆಸರು ಹೇಳಿಕೊಂಡು ಪ್ಯಾಲೆಸ್ಟೈನ್ ಧ್ವಜ ಹಾರಿಸುತ್ತಾರೆ. ಎಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂದು ಕಿಡಿಕಾರಿದರು.
ಬಂಟ್ವಾಳದಲ್ಲಿ ಸವಾಲು ಹಾಕಿದವರನ್ನು ಹಿಡಿದು ಜೈಲಿಗೆ ಹಾಕದೆ, ಪೊಲೀಸರು ಕರೆದು ಕಾಫಿ ಕೊಟ್ಟು ಕಳಿಸಿದ್ದಾರೆ. ನಾವು ಕರೆದಾಗ ಬನ್ನಿ ಅಂತಾರೆ, ಖಡಕ್ ನಿರ್ಧಾರಗಳಿಲ್ಲ ಈ ಕೋಮು ದಳ್ಳುರಿ ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಈ ಘಟನೆಗಳಿಗೆ ಪ್ರಚೋದನೆ ಕೊಡುತ್ತಿರುವುದೇ ಕಾಂಗ್ರೆಸ್‌ಪಕ್ಷ. ಒಂದು ಸಮುದಾಯದ ಓಲೈಕೆಗಾಗಿ ಕಾಂಗ್ರೆಸ್, ಅವರು ಏನೇ ಮಾಡಿದರೂ ಕೇಳುವುದಿಲ್ಲ. ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ನ್ಯಾಯಾಲಯದಲ್ಲಿ ಏನಾಗುತ್ತದೆ ಎಂಬುದೇ ಅವರಿಗೆ ಚಿಂತೆ ಎಂದು ಕಿಡಿಕಾರಿದರು.
ಚಲುವರಾಯಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರು ಸತ್ಯಹರಿಶ್ಚಂದ್ರನ ಮೊಮಕ್ಕಳಾ? ವಿಧಾನಸೌಧದಲ್ಲಿ ಕೂಗಿದಾಗ ಕೂಗೇ ಇಲ್ಲವೆಂದರು. ರಾಮೇಶ್ವರಂ ಕೆಫೆನದ್ದು ದೋಸೆ ಗಲಾಟೆ ಎಂದಿದ್ದರು. ಈಗ ಎನ್‌ಐಎನವರು ಹಿಡಿದಾಕಿದ್ದಾರೆ ಎಂದು ಹೇಳಿದರು.
ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣ ಸಂಬಂಧ, ಓ ಮೈ ಬ್ರದರ್ಸ್ ಎನ್ನುತ್ತಾರೆ. ಅವರು ತಪ್ಪೇ ಮಾಡಿಲ್ಲ ಎನ್ನುತ್ತಾರೆ. ಅಲ್ಲಿ ನಡೆದದ್ದನ್ನು, ಜನ ಹೇಳಿದ್ದನ್ನು ನಾವು ಹೇಳಿದ್ದೀವಿ ಎಂದರು.
ಸರ್ಕಾರ ತನಿಖೆಗೂ ಮೊದಲು ಕ್ಲೀನ್ ಚಿಟ್ ಕೊಡುತ್ತಾರೆ. ಗಣೇಶ ಹಬ್ಬದಲ್ಲಿ ಪೆಟ್ರೋಲ್ ಬಾಂಬ್, ಲಾಂಗು ಮಚ್ಚು ಹೇಗೆ ಬಂತು? ಗಲಾಟೆ ಆಗುತ್ತದೆ ಎಂಬುದು ಗೊತ್ತಿದ್ದರೂ ಮುನ್ನೆಚ್ಚರಿಕೆ ವಹಿಸಿದ್ದರೂ ಕೇರಳದಿಂದ ಇಲ್ಲಿಗೆ ಬಂದು ಕೃತ್ಯಗಳನ್ನು ಮಾಡಿದ್ದಾರೆ. ಹಿಂದುಗಳ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ನಾಯಕರ ಜೊತೆ ನಡೆಸಿದ ಸಂಧಾನ ವಿಫಲವಾಯಿತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅಶೋಕ್, ಸಂಘದಿಂದ ಬಿಜೆಪಿಗೆ ಯಾವುದೇ ಸೂಚನೆ ಬಂದಿಲ್ಲ. ಸಂಘ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ. ಸಂಘ ರಾಜಕೀಯ ಮಾಡುವುದಿಲ್ಲ. ಸಂಘದ ಕಾರ್ಯ ಪದ್ಧತಿಯಲ್ಲಿ ರಾಜಕೀಯ ನುಸುಳಿಲ್ಲ ಎಂದು ಸಮರ್ಥಿಸಿಕೊಂಡರು.
ಅಧಿಕಾರಿ/ನೌಕರರ ಪ್ರಾಸಿಕ್ಯೂಷನ್ ವಿವರ ಕೇಳಿ ರಾಜ್ಯಪಾಲರು ಥಾವರ್‌ಚಂದ್ರ ಗೆಹ್ಲೋಟ್ ಅವರು ವಿವರಣೆ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡ ಅವರು, ರಾಜ್ಯಪಾಲರು ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿಲ. ಕಾನೂನು ಪ್ರಕಾರ ಪತ್ರ ಬರೆದಿದ್ದಾರೆ. ಅವರಿಗೆ ಮಾಹಿತಿ ಕೇಳುವ ಅಧಿಕಾರ ಇದೆ. ಮಾಹಿತಿ ಬಂದ ನಂತರ ರಾಜ್ಯಪಾಲರು ಔಚಿತ್ಯವಾದ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.