ಬೆಂಗಳೂರು,ಸೆ.17- ನಾಳೆಯೊಳಗೆ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ರಸ್ತೆ ಗುಂಡಿಗಳನ್ನು ಮುಚ್ಚಲು ಎರಡು ವಾರ ಗಡುವು ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಗರಪ್ರದಕ್ಷಿಣೆ ಬಂದಾಗ ಸೆ.20 ರೊಳಗೆ ಎಲ್ಲಾ ಗುಂಡಿಗಳನ್ನೂ ಮುಚ್ಚುವಂತೆ ಸೂಚನೆ ನೀಡಿದ್ದರು.
ನಾವು 17ರೊಳಗೆ ಗುಂಡಿಗಳನ್ನು ಮುಚ್ಚಬೇಕು ಎಂದುಕೊಂಡು ಹಗಲು-ರಾತ್ರಿ ಕಾಮಗಾರಿ ಮಾಡಿದ್ದೆವು. ನಾಳೆಯೊಳಗೆ ಎಲ್ಲಾ ಗುಂಡಿಗಳನ್ನೂ ಮುಚ್ಚಲಾಗುವುದು ಎಂದು ಹೇಳಿದರು. ನಿತ್ಯ ಗುಂಡಿ ಗಮನ ಆ್ಯಪ್‌ನಲ್ಲಿ ಪ್ರತಿನಿತ್ಯ ಒಂದು ಸಾವಿರ ಕೇಸುಗಳು ಬರುತ್ತಿವೆ.
ಪ್ರತಿನಿತ್ಯ 800 ಗುಂಡಿಗಳನ್ನು ಮುಚ್ಚುವ ಸಾಮರ್ಥ್ಯ ಹೊಂದಿದ್ದೇವೆ. ಗುಂಡಿ ಆ್ಯಪ್ ಹೊರತುಪಡಿಸಿ ನಾವೇ ಹಲವು ಗುಂಡಿಗಳನ್ನು ಪತ್ತೆ ಹಚ್ಚಿ ಮುಚ್ಚುತ್ತಿದ್ದೇವೆ. ಈಗಾಗಲೇ ಆರು ಸಾವಿರ ಗುಂಡಿಗಳನ್ನು ಮುಚ್ಚಿದ್ದೇವೆ ಎಂದರು.
ರಸ್ತೆ ಗುಂಡಿ ಹೊರತಾಗಿ ರಸ್ತೆ ಬ್ಯಾಡ್ ರಿಚ್ವರ್ಸ್ ಸರಿಪಡಿಸಿದ್ದೇವೆ. 32 ಸಾವಿರ ಚ.ಕೀ. ರಸ್ತೆ ಬ್ಯಾಡ್ ರಿಚ್ವರ್ಸ್ ಸರಿಪಡಿಸಲಾಗಿದೆ. 25 ಕೆ.ಜಿ. ತೂಕದ 9 ಸಾವಿರ ಕೊಲ್ಸ್ ಮಿಕ್ಸ್ ಬ್ಯಾಗ್ ಬಳಕೆ ಮಾಡಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ಮುನಿರತ್ನ ಅವರ ಅಣತಿಯಂತೆ ಟೆಂಡರ್ ಕ್ಯಾನ್ಸಲ್ ಮಾಡಿದ್ದಾರೆ ಎಂಬ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಮಾಡಿದ್ದ ಗಂಭೀರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಯುಕ್ತರು, ಟೆಂಡರ್ ಕ್ಯಾನ್ಸಲ್ ಮಾಡುವ ಅಧಿಕಾರ ಮುಖ್ಯ ಆಯುಕ್ತರಾದ ನನಗೆ ಇಲ್ಲ, ಟೆಂಡರ್ ಕ್ಯಾನ್ಸಲ್ ಮಾಡುವುದು, ಕೊಡುವುದು ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರ ಅಧಿಕಾರ ವ್ಯಾಪ್ತಿಗೆ ಬರುತ್ತದೆ. ಟೆಂಡರ್ ಕ್ಯಾನ್ಸಲ್ ಬಗ್ಗೆ ದೂರು ಮನವಿ ಬಂದರೆ ಅದನ್ನು ಆಯಾ ವಲಯಗಳಿಗೆ ಕಳುಹಿಸಿಕೊಡುತ್ತೇವೆ ಎಂದರು.
ಒಬ್ಬ ಮುಖ್ಯ ಆಯುಕ್ತ ಝೋನ್‌ಗಳಲ್ಲಿನ ಎಲ್ಲಾ ವಿಷಯಗಳ ಬಗ್ಗೆಯೂ ಕ್ರಮ ತೆಗೆದುಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ಎಂಟು ಝೋನ್‌ಗಳಲ್ಲಿಯೂ ಐಎಎಸ್ ಅಧಿಕಾರಿಗಳು ಇದ್ದಾರೆ. ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.