Friday, September 20, 2024
Homeಜಿಲ್ಲಾ ಸುದ್ದಿಗಳು | District NewsSUPER NEWS : ಬಿಸಿಯೂಟಕ್ಕೆ ಶಾಲಾ ಆವರಣದಲ್ಲೇ ಸಿಗುತ್ತೆ ತರಕಾರಿ, ಮಾದರಿಯಾಯ್ತು ಕ್ಯಾಮೇನಹಳ್ಳಿ ಸ್ಕೂಲ್

SUPER NEWS : ಬಿಸಿಯೂಟಕ್ಕೆ ಶಾಲಾ ಆವರಣದಲ್ಲೇ ಸಿಗುತ್ತೆ ತರಕಾರಿ, ಮಾದರಿಯಾಯ್ತು ಕ್ಯಾಮೇನಹಳ್ಳಿ ಸ್ಕೂಲ್

Vegetables are available in the school premises for cooking Mid Day Meal

ಕೊರಟಗೆರೆ,ಸೆ.18- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳಿಗೆ ಮಾದರಿ ಎಂಬುವಂತೆ ಶಾಲೆಯ ಮುಂಭಾಗ ಅನಾಗತ್ಯವಾಗಿ ಪೋಲಾಗುತ್ತಿದ್ದ ನೀರನ್ನು ಬಳಸಿಕೊಂಡು ತಾಜಾ ತರಕಾರಿ ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಕೆ ಮಾಡುವ ಮೂಲಕ ಸರ್ಕಾರಿ ಶಾಲೆಯೊಂದು ಇತರ ಶಾಲೆಗಳಿಗೆ ಆದರ್ಶವಾಗಿ ಹೊರಹೊಮಿದೆ.

ತಾಲೂಕಿನ ಕ್ಯಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇಡೀ ತಾಲೂಕಿಗೆ ಮಾದರಿ ಶಾಲೆಯಾಗಿದ್ದು, ಶಾಲಾ ಆವರಣದಲ್ಲಿ ಅನಗತ್ಯವಾಗಿ ಪೋಲಾಗುತ್ತಿದ್ದ ನೀರನ್ನೇ ಬಳಸಿ ತಾಜಾ ತರಕಾರಿಗಳನ್ನು ಬೆಳೆದು ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಸರ್ಕಾರಿ ಶಾಲೆ ಎಂದರೆ ಬಹುತೇಕ ಜನರಿಗೆ ಅಸಡ್ಡೆ, ಅಲ್ಲಿನ ಶಿಕ್ಷಕರು ಸಹ ಕಾಟಾಚಾರಕ್ಕೆ ಬಂದು ಉತ್ತಮ ಶಿಕ್ಷಣಕ್ಕೆ ಒತ್ತು ನೀಡದೆ, ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದು ಸಮಾಜದಲ್ಲಿ ಮೊದಲಿನಿಂದಲೂ ಜನರ ಭಾವನೆಯಾಗಿದ್ದು, ಅದಕ್ಕೆ ವಿರುದ್ಧ ಎಂಬುವಂತೆ ಈ ಶಾಲೆಯಲ್ಲಿ ಉತ್ತಮ ಪಾಠ ಪ್ರವಚನಗಳ ಜೊತೆಗೆ ಶಿಸ್ತುಬದ್ಧ ಕಲಿಕೆ, ಶಿಕ್ಷಣ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳನ್ನು ಬಿಡುವಿನ ವೇಳೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳುವ ಮೂಲಕ ಉತ್ತಮ ತರಕಾರಿ ಕೈ ತೋಟ ಮಾಡುವ ಮೂಲಕ ಮಾದರಿಯಾಗಿದೆ.

ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗಳಾಗಿ, ವಿದ್ಯಾರ್ಥಿಗಳು ಹಾಜರಾತಿ ಇಲ್ಲದೆ ಬೆರಳೆಣಿಕೆ ವಿದ್ಯಾರ್ಥಿಗಳನ್ನಿಟ್ಟುಕೊಂಡು ಶಾಲೆಯನ್ನು ನಡೆಸಲಾಗದೆ, ಇತ್ತ ಮುಚ್ಚಲೂ ಆಗದ ಸಂಕಷ್ಟ ಪರಿಸ್ಥಿತಿ ಇದೆ. ಜನರು ಸಹ ಸ್ಥಳೀಯ ಶಾಲೆಗಳ ಸ್ಥಿತಿಗತಿ ನೋಡಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸದೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ದಾಖಲಿಸುವುದು ಸರ್ವೇಸಾಮಾನ್ಯವಾಗಿದೆ.

ಇಂತಹ ವಾತಾವರಣಗಳಿಂದ ಸರ್ಕಾರಿ ಶಾಲೆಗಳು ಹೊರಬರಬೇಕೆಂದರೆ ಉತ್ತಮ ಶಿಕ್ಷಕರುಗಳು ಶಾಲೆಯಲ್ಲಿ ಗುಣಮಟ್ಟ ಶಿಕ್ಷಣ ನೀಡುವ ಮೂಲಕ ಸರ್ಕಾರ ಶಾಲೆಗಳನ್ನು ಉಳಿಸುವ ಕೆಲಸ ಮಾಡುವ ಅನಿವಾರ್ಯತೆ ಇದ್ದು, ಅದಕ್ಕೆ ಪೂರಕ ಎಂಬಂತೆ ಈ ಶಾಲೆ ಶಿಕ್ಷಣ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿಯೂ ಉತ್ತಮ ಹೆಸರು ಪಡೆದು ಇತರ ಶಾಲೆಗಳಿಗೆ ಮಾದರಿ ಎಂಬಂತಿದೆ ಎನ್ನಲಾಗಿದೆ.

ಒಟ್ಟರೆ ಈ ಶಾಲೆಯ ವಾತಾವರಣ ತುಂಬಾ ಉತ್ತಮವಾಗಿದೆ ಎಂಬುವ ಅಭಿಪ್ರಾಯ ಸ್ಥಳೀಯ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಶಿಕ್ಷಣದ ಜೊತೆ ಜೊತೆಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದು, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಚರ್ಚಾ ಸ್ಪರ್ಧೆ, ಸಂಗೀತ, ನೃತ್ಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮ ಪಡುತ್ತಿರುವ ಅದರ ಜೊತೆಜೊತೆಗೆ ಇತ್ತೀಚಿಗೆ ಶಾಲಾ ಆವರಣದಲ್ಲಿ ಪೋಲಾಗುತ್ತಿದ್ದ ನೀರನ್ನು ಸಮರ್ಪಕವಾಗಿ ಬಳಸಿ ಶಾಲೆಯ ಆವರಣದಲ್ಲಿ ನೆರಳು ಕೊಡುವಂತಹ ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಜೊತೆಗೆ ಹೂವಿನ ತೋಟ ಹಾಗೂ ಮಧ್ಯಾಹ್ನದ ದಾಸೋಹಕ್ಕೆ ತಾಜಾ ತರಕಾರಿ ಬೆಳೆಯುವ ಮತ್ತಷ್ಟು ಮೆಚ್ಚುಗೆ ಗಳಿಸಿದೆ.

ಮಕ್ಕಳ ಆಟಪಾಠದ ಜೊತೆಗೆ ನಮ ಶಾಲೆಯಲ್ಲಿ ನೀರು ಅನಗತ್ಯವಾಗಿ ವ್ಯಯವಾಗುತ್ತಿದ್ದಂತ ನೀರಿನ ಬಳಸಿಕೊಂಡು ಸಮೃದ್ಧಿಯಾಗಿ ತಾಜಾ ತರಕಾರಿಯನ್ನು ಬೆಳೆಯುತ್ತಿದ್ದು, ಈ ತಾಜಾ ತರಕಾರಿಯನ್ನು ಬಿಸಿ ಊಟಕ್ಕೆ ಬಳಸಿಕೊಳ್ಳುತ್ತಿದ್ದೇವೆ, ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ವ್ಯವಸಾಯದ ಗುಣಮಟ್ಟ ಹೆಚ್ಚಿಸುವಂತಹ ಅಭ್ಯಾಸಕ್ಕೆ ತರಕಾರಿಯನ್ನು ಬೆಳೆಯುವಂತ ಹವ್ಯಾಸ ಮಾಡುತ್ತಿದ್ದೇವೆ ಎಂದು ಶಿಕ್ಷಕಿ ಸುಜಾತ ತಿಳಿಸಿದ್ದಾರೆ.

ಇಲ್ಲಿನ ಹಿರಿಯ ಪ್ರಾಥಮಿಕ ಪಾಠಶಾಲೆ ಬಹಳ ಚಿಕ್ಕದಿದ್ದರೂ ಚೊಕ್ಕವಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ವ್ಯವಸಾಯದಲ್ಲಿಯೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅದರ ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತ ಕೆಲಸ ಮಾಡಲಾಗುತ್ತಿದ್ದು, ವಿರಾಮದ ಸಂದರ್ಭದಲ್ಲಿ ಕೈತೋಟವನ್ನು ಬೆಳೆಸಲಾಗಿದ್ದು, ತಾಜಾ ತರಕಾರಿಯನ್ನು ಬೆಳೆದು ಬಹಳಷ್ಟು ಉಪಯುಕ್ತವಾಗಿ ದಾಸೋಹಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ನಂಜುಂಡಯ್ಯ ಹೇಳಿದ್ದಾರೆ.

ಶಾಲೆಯ ಕಾಂಪೌಂಡ್‌ನಲ್ಲಿ ಯಾವುದನ್ನೂ ವ್ಯರ್ಥ ಮಾಡದೆ ಜಾಗವನ್ನು ಬಳಸಿಕೊಂಡು ತಾಜಾ ತರಕಾರಿಯನ್ನು ಬೆಳೆಸಲಾಗುತ್ತಿದೆ, ನೀರು ಪೋಲು ಮಾಡದೆ ತರಕಾರಿ ಬೆಳೆಯಲಾಗುತ್ತಿದೆ ಇದು ಬಹಳ ಉತ್ತಮವಾದ ಬೆಳವಣಿಗೆ ಇದನ್ನ ದಾಸೋಹಕ್ಕೆ ಬಳಸಲಾಗುತ್ತದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಗಂಗಯ್ಯ ತಿಳಿಸಿದ್ದಾರೆ.

ಶಾಲೆಯ ಶಿಕ್ಷಕರ ಮಾರ್ಗದರ್ಶನದಂತೆ ನಾವು ನಮ ಶಾಲೆಯ ಮುಂಭಾಗ ತಾಜಾ ತರಕಾರಿಯನ್ನು ಬೆಳೆಯುತ್ತಿದ್ದೇವೆ. ನೇರಳೆ ಗಿಡ ಮಾವಿನ ಗಿಡ ಬಾಳೆ ಗಿಡ ಸಂಪಿಗೆ ಗಿಡ ಸೇರಿದಂತೆ ಇನ್ನಿತರ ಗಿಡಗಳನ್ನು ಬೆಳೆಯುತ್ತಿದ್ದೇವೆ ಎಂದು ನಾಲ್ಕನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಹೇಳಿದ್ದಾಳೆ.

RELATED ARTICLES

Latest News