ಬೆಂಗಳೂರು,ಅ.25- ನಗರದ ಹೆಬ್ಬಾಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿರುವ ನಕಲಿ ಮತದಾರರ ಗುರಿತಿನ ಚೀಟಿ, ಡಿಎಲ್, ಆಧಾರ್ ಪ್ರಿಂಟ್ ಪ್ರಕರಣವನ್ನು ರಾಜ್ಯಸರ್ಕಾರ ಕೂಡಲೇ ಸಿಬಿಐ ಇಲ್ಲವೇ ಎನ್‍ಐಎ ತನಿಖೆಗೆ ವಹಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವರಾದ ಎಸ್.ಸುರೇಶ್‍ಕುಮಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಮುಖಂಡ ವಿವೇಕ್ ರೆಡ್ಡಿ ಅವರು, ಇದು ಅತ್ಯಂತ ಗಂಭೀರವಾದ ಪ್ರಕರಣವಾಗಿರುವುದರಿಂದ ನಿಷ್ಟಕ್ಷಪಾತ ತನಿಖೆಯಾಗಬೇಕಾದರೆ ಸಿಬಿಐ ಇಲ್ಲವೇ ಎನ್‍ಐಎ ಗೆ ವಹಿಸುವಂತೆ ಆಗ್ರಹಿಸಿದರು.
ಮಾಜಿ ಸಚಿವ ಎಸ್.ಸುರೇಶ್‍ಕುಮಾರ್ ಮಾತನಾಡಿ, ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯಲ್ಲಿ ನಕಲಿ ಮತದಾರರ ಗುರುತಿನ ಚೀಟಿ, ಚಾಲನವಾ ಪರವಾನಗಿ ಹಾಗೂ ಆಧಾರ್‍ಕಾರ್ಡ್ ಪ್ರಿಂಟ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಆರೋಪಿಗಳೆಲ್ಲರೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಆಪ್ತರು ಎಂದು ದೂರಿದರು.
ರಾಷ್ಟ್ರೀಯ ಭದ್ರತಾ ವಿರುದ್ಧವಾಗಿ ಗುರುತಿನ ಚೀಟಿಗಳನ್ನು ಪ್ರಿಂಟ್ ಮಾಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಉದ್ದೇಶಪೂರಕವಾಗಿಯೇ ಮತದಾರರನ್ನು ಹೆಚ್ಚಿಸಿಕೊಳ್ಳಲು ನಡೆಸಿರುವ ಹುನ್ನಾರವಾಗಿದೆ. ಈ ಹಿಂದೆ ಹೆಬ್ಬಾಳದ ಬಿಜೆಪಿ ಮುಖಂಡ ಕಟ್ಟಾ ಜಗದೀಶ್ ಆರೋಪ ಮಾಡಿದ್ದರು ಎಂದರು.
7 ಜನ್ಮವೆತ್ತಿದರೂ ರಾಮನಗರ ಛಿದ್ರ ಮಾಡಲು ಸಾಧ್ಯವಿಲ್ಲ ; ಎಚ್‍ಡಿಕೆ ಆಕ್ರೋಶ
ವಿಧಾನಸಭೆ ಚುನಾವಣೆಗೂ ಮುನ್ನವೇ ನಾವು ನಕಲಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ದೂರಿದ್ದೆವು. ಆಗ ಸಾಕ್ಷಿ ಎಲ್ಲಿ ಎಂದು ಕೆಲವರು ಕೇಳಿದ್ದರು. ಈಗ ಸಚಿವ ಭೈರತಿ ಸುರೇಶ್ ಆಪ್ತರೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಇನ್ನೇನು ಬೇಕು ಎಂದು ಸುರೇಶ್ ಕುಮಾರ್ ಪ್ರಶ್ನೆ ಮಾಡಿದರು.
ಇದು ರಾಷ್ಟ್ರೀಯ ಆಂತರಿಕ ಭದ್ರತೆಗೆ ಸಂಬಂಧಪಟ್ಟ ಪ್ರಕರಣವಾಗಿದೆ. ಒಂದು ಕಡೆ ಭೈರತಿ ಸುರೇಶ್ ಆಪ್ತರು ನೇರ ಭಾಗಿಯಾಗಿದ್ದಾರೆ. ಮತ್ತೊಂದು ಕಡೆ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಮಾಪ್ತರು. ಇದು ರಾಜ್ಯ ಪೊಲೀಸರಿಂದ ನಿಷ್ಪಕ್ಷಪಾತವಾದ ತನಿಖೆ ನಡೆಯಲು ಸಾಧ್ಯವಿಲ್ಲ. ಆದರೆ ಸಿಬಿಐ ಇಲ್ಲವೇ ಎನ್‍ಐಎ ಗೆ ವಹಿಸಬೇಕೆಂದು ಮನವಿ ಮಾಡಿದರು.
ಪ್ರಕರಣವನ್ನು ನಾವು ಇಲ್ಲಿಗೇ ಬಿಡುವುದಿಲ್ಲ. ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಮುಖ್ಯಮಂತ್ರಿಗಳು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತನ್ನ ನಂಟ, ಭಂಟ ಎನ್ನುವುದನ್ನು ಬಿಟ್ಟು ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು. ಪೊಲೀಸರು ಭೈರತಿ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಿ ಎಂದು ಆಗ್ರಹಿಸಿದರು.
ಸ್ಕೂಟರ್ ಹತ್ತಿಕೊಂಡು ಅವರ ಜೊತೆ ಕ್ಷೇತ್ರದಲ್ಲಿ ತಿರುಗಾಡುತ್ತಾರೆ ಎಂದು ಸಿಸಿಬಿಗೆ ಸಿಕ್ಕಿಬಿದ್ದಿರುವ ಆರೋಪಿಗಳಿ ಭೈರತಿ ಸುರೇಶ್ ಕಡೆಯವರೇ. ಪ್ರಕರಣ ಹೊರಬರುತ್ತಿದ್ದಂತೆ ಈಗ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಮಗೆ ಪರಿಚಯವಿಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ತನಿಖೆಯಾಗಬೇಕು ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರ ಹಂಚಿಕೆ ವಿಳಂಬ
ಬಿಜೆಪಿ ಕಾನೂನು ಘಟಕದ ಮುಖ್ಯಸ್ಥ ವಿವೇಕ್ ರೆಡ್ಡಿ ಮಾತನಾಡಿ, ಇದೊಂದು ರಾಷ್ಟ್ರೀಯ ಅಪರಾಧ. ಆಧಾರ್‍ಕಾರ್ಡ್ ಮೂಲಕ ಮತದಾರರ ಗುರುತಿನ ಚೀಟಿ ನೀಡುವುದು ಶಿಕ್ಷಾರ್ಹ ಅಪರಾಧ. ಪೊಲೀಸರು ಬಹಳ ಲಘುವಾಗಿ ತೆಗೆದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಇದರ ಮೂಲಜಾಲ ಹೊರಗೆಳೆಯಬೇಕು. ಕೇವಲ ಆರೋಪಿಗಳಿಗೆ ನೋಟಿಸ್ ಕೊಟ್ಟು ಬಿಟ್ಟುಕಳುಹಿಸಿದ್ದಾರೆ. ಮೇಲ್ನೋಟಕ್ಕೆ ಸಚಿವರ ಪ್ರಭಾವದಿಂದ ಪ್ರಕರಣವನ್ನು ಮುಚ್ಚಿಹಾಕಲು ಷಡ್ಯಂತರ ನಡೆದಿದೆ. ಈ ಜಾಲದ ಹಿಂದೆ ಇರುವವರನ್ನು ಕೂಡಲೇ ಬಂಧಿಸಬೇಕೆಂದು ವಿವೇಕ್ ರೆಡ್ಡಿ ಆಗ್ರಹಿಸಿದರು.