Monday, January 12, 2026
Homeರಾಷ್ಟ್ರೀಯಸುಗ್ಗಿಹಬ್ಬ ಸಂಕ್ರಾಂತಿಗೆ ರಾಜ್ಯದೆಲ್ಲೆಡೆ ಭರದ ಸಿದ್ಧತೆ

ಸುಗ್ಗಿಹಬ್ಬ ಸಂಕ್ರಾಂತಿಗೆ ರಾಜ್ಯದೆಲ್ಲೆಡೆ ಭರದ ಸಿದ್ಧತೆ

Preparations in full swing for Sankranti

ಬೆಂಗಳೂರು,ಜ.12- ಸುಗ್ಗಿಹಬ್ಬ ಸಂಕ್ರಾಂತಿಗೆ ರಾಜ್ಯದೆಲ್ಲೆಡೆ ಈಗಾಗಲೇ ಕಳೆಗಟ್ಟಿದ್ದು, ತಯಾರಿ ಭರ್ಜರಿಯಿಂದ ನಡೆಯುತ್ತಿದ್ದು, ಮಾರುಕಟ್ಟೆಗೆ ಲೋಡ್‌ಗಟ್ಟಲೆ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ ಬರುತ್ತಿದೆ. ಹಬ್ಬಕ್ಕೆ ಮೂರು ದಿನ ಬಾಕಿ ಉಳಿದಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರಮುಖ ಮಾರುಕಟ್ಟೆಯಲ್ಲಿ ಅಗತ್ಯವಸ್ತುಗಳ ಮಾರಾಟ ಭರದಿಂದ ಸಾಗಿದೆ.

ಬೆಂಗಳೂರಿನ ಯಶವಂತಪುರ, ಆರ್‌ಎಂಸಿ ಮಾರುಕಟ್ಟೆಗೆ ನೂರಾರು ಲಾರಿಗಳಲ್ಲಿ ಕಬ್ಬು, ಗೆಣಸು, ಕಡಲೆಕಾಯಿ, ಅವರೆಕಾಯಿ ಬಂದಿದ್ದು, ಇಂದು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವಲ್ಲದೆ, ಕೆ.ಆರ್‌.ಮಾರುಕಟ್ಟೆಯಲ್ಲೂ ಕೂಡ ವ್ಯಾಪಾರ ಭರದಿಂದ ಸಾಗಿತ್ತು. ತಮಿಳುನಾಡು ಮತ್ತು ಆಂಧ್ರದಿಂದ ಕಬ್ಬು ಬಂದಿದ್ದು, ಮಾರುಕಟ್ಟೆಯಿಂದ ಚಿಲ್ಲರೆ ವ್ಯಾಪಾರಿಗಳು ಕೊಂಡೊಯ್ಯುತ್ತಿದ್ದ ದೃಶ್ಯಗಳು ಕಂಡುಬಂದವು.

ಒಂದು ಕಂತೆ ಕಬ್ಬು 500 ರೂ. ಯಶವಂತಪುರ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. ಚಿಲ್ಲರೆಯಾಗಿ ಒಂದು ಜಲ್ಲೆ 50 ರೂ.ಗೆ ಇಂದು ಮಾರಾಟವಾಗುತ್ತಿದೆ. ನಾಳೆ, ನಾಡಿದ್ದು 100 ರೂ.ಗಳಿಗೆ ಜೋಡಿ ಕಬ್ಬು ಮಾರಾಟ ಮಾಡಲಾಗುವುದು.

ಸಿಹಿ ಗೆಣಸು ಕೆಜಿಗೆ 40 ರೂ., ಅವರೆಕಾಯಿ 100 ರೂ.ಗೆ 2 ಕೆಜಿ ಮಾರಾಟ ಮಾಡಲಾಗುತ್ತಿದೆ. ಸಕ್ಕರೆ ಅಚ್ಚು, ಬೆಲ್ಲ, ಕೊಬ್ಬರಿ, ಎಳ್ಳು, ಹುರಿದ ಕಡಲೆಬೀಜ ಕೂಡಾ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದ್ದು, ಹೆಚ್ಚು ಜನರು ಹೋಂಮೇಡ್‌ ಎಳ್ಳು-ಬೆಲ್ಲಕ್ಕೆ ಮುಗಿಬಿದ್ದಿದ್ದು, ಮಿಶ್ರಣ ಮಾಡಿದ ಎಳ್ಳು-ಬೆಲ್ಲ ಕೆಜಿಗೆ 400 ರೂ.ಗಳಿಂದ 500 ರೂ.ಗೆ ಮಾರಾಟವಾಗುತ್ತಿದೆ.

ಹೂವಿನ ಬೆಲೆ ಸದ್ಯ ಇಳಿಮುಖವಾಗಿದ್ದು, ನಾಳೆ,ನಾಡಿದ್ದು ತುಸು ಏರಿಕೆಯಾಗುವ ಸಾಧ್ಯತೆಯಿದೆ. ಏಲಕ್ಕಿ ಬಾಳೆಹಣ್ಣು ಕೆಜಿಗೆ 100 ರೂ. ಗಡಿ ದಾಟಿದ್ದು, 120 ರೂ.ವರೆಗೂ ಮಾರಾಟವಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.ಒಟ್ಟಿನಲ್ಲಿ ಸುಗ್ಗಿಹಬ್ಬ ಸಂಕ್ರಾಂತಿಗೆ ರಾಜ್ಯದೆಲ್ಲೆಡೆ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ.

RELATED ARTICLES

Latest News