ಬೆಂಗಳೂರು, ಸೆ.20- ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹ ಬಳಿಯಿಂದ ಮುನಿರತ್ನ ಅವರನ್ನು ಕಗ್ಗಲಿಪುರ ಠಾಣೆ ಪೊಲೀಸರು ಕರೆದೊಯ್ದು ನಂತರ ಬಂಧಿಸಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದಾರೆ.ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಿನ್ನೆ ಮುನಿರತ್ನ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ಅದರಂತೆ ಇಂದು ಮುನಿರತ್ನ ಅವರು ಜೈಲಿನಿಂದ ಹೊರಬಂದ ತಕ್ಷಣವೇ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಕಗ್ಗಲಿಪುರ ಠಾಣೆ ಪೊಲೀಸರು ವಶಕ್ಕೆ ಪಡೆದರು.ರಾಮನಗರ ಜಿಲ್ಲೆಯ ಮಾಗಡಿ ಉಪವಿಭಾಗದ ಡಿವೈಎಸ್ಪಿ ಪ್ರವೀಣ್ ಹಾಗೂ ರಾಮನಗರ ಉಪವಿಭಾಗದ ಡಿವೈಎಸ್ಪಿ ದಿನಕರ್ ಶೆಟ್ಟಿ ನೇತೃತ್ವದ ತಂಡ ಮುನಿರತ್ನ ಜೈಲಿನಿಂದ ಹೊರಬರುವುದನ್ನೇ ಕಾದುಕುಳಿತಿತ್ತು.
ಅವರು ಜೈಲಿನಿಂದ ಹೊರಬರುತ್ತಿದ್ದಂತೆ ವಶಕ್ಕೆ ತೆಗೆದುಕೊಂಡ ತಂಡ 7 ಜೀಪುಗಳು, ಒಂದು ಮೀಸಲು ಪಡೆಯ ವಾಹನದ ಭದ್ರತೆಯೊಂದಿಗೆ ಅವರನ್ನು ವಶಕ್ಕೆ ತೆಗೆದುಕೊಂಡು ಕಗ್ಗಲಿಪುರ ಠಾಣೆಗೆ ಕರೆದೊಯ್ದು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇಂದು ಸಂಜೆ ಮುನಿರತ್ನ ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.
ಶಾಸಕ ಮುನಿರತ್ನ ವಿರುದ್ಧ ಮೊನ್ನೆ ಸಂಜೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ದಾಖಲಾಗಿದೆ. ಕಗ್ಗಲೀಪುರದ ಖಾಸಗಿ ರೆಸಾರ್ಟ್ ಹಾಗೂ ನಗರದ ಗೋಡೌನ್ನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿ 40 ವರ್ಷದ ಮಹಿಳೆಯೊಬ್ಬರು ಶಾಸಕ ಮುನಿರತ್ನ ವಿರುದ್ಧ ದೂರು ನೀಡಿದ್ದಾರೆ.
ದೂರಿನನ್ವಯ ಪೊಲೀಸರು ಶಾಸಕ ಮುನಿರತ್ನ ನಾಯ್ಡು ಮತ್ತು ವಿಜಯ್ ಕುಮಾರ್, ಸುಧಾಕರ, ಕಿರಣ್ ಕುಮಾರ್ , ಲೋಹಿತ್ ಗೌಡ, ಮಂಜುನಾಥ ಮತ್ತು ಲೋಕಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.