ನವದೆಹಲಿ, ಜ.13- ಬಿಜೆಪಿ ಕಾರ್ಯಕಾರಿ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ನಿತಿನ್ ನಬಿನ್ ಅವರು ಜ. 20 ರಂದು ಪಕ್ಷದ ಪೂರ್ಣ ಪ್ರಮಾಣದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯಾಧ್ಯಕ್ಷರು ಮತ್ತು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಅಧ್ಯಕ್ಷರ ಚುನಾವಣೆಗೆ ನಾಮನಿರ್ದೇಶನಗಳು ಜನವರಿ 19 ರಂದು ನಡೆಯಲಿದ್ದು, ಮರುದಿನ ಚುನಾವಣೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಸೂಚಿಸಿವೆ. ಡಿಸೆಂಬರ್ 15 ರಂದು ನಬಿನ್ ಅವರನ್ನು ಬಿಜೆಪಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. 45 ವರ್ಷದ ನಬಿನ್ ಬಿಹಾರದ ಪಾಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಭವಿಷ್ಯದಲ್ಲಿ ಯುವ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಈ ಹುದ್ದೆಯನ್ನು ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ. ಬಿಜೆಪಿಯೊಳಗೆ ನಬಿನ್ ಜೊತೆ ನಿಕಟವಾಗಿ ಕೆಲಸ ಮಾಡಿದವರು ಅವರನ್ನು ಕಠಿಣ ಪರಿಶ್ರಮಿ, ರಾಜಕೀಯವಾಗಿ ಕುತೂಹಲಿ ಎಂದು ಬಣ್ಣಿಸಿದ್ದಾರೆ.
ನಬಿನ್ ಅವರ ತಂದೆ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಜನಸಂಘದ ಮಾಜಿ ಸದಸ್ಯ, ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುಮಾರು 2 ದಶಕಗಳ ರಾಜಕೀಯ ಅನುಭವ ಹೊಂದಿರುವ ನಬಿನ್ ಐದು ಬಾರಿ ಬಂಕಿಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ ಮತ್ತು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಬಿಹಾರ ಮತ್ತು ಪೂರ್ವ ಭಾರತದಿಂದ ಆಯ್ಕೆಯಾದ ಮೊದಲ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಇವರಾಗಿದ್ದಾರೆ.
ಛತ್ತೀಸ್‌ಗಢದ ಉಸ್ತುವಾರಿಯಾಗಿದ್ದ ನಬಿನ್ ಅಲ್ಲಿ ಪಕ್ಷವನ್ನು ಆಡಳಿತಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರ ಕೆಲಸವನ್ನು ಗುರುತಿಸಿದ ಬಳಿಕ ಇವರಿಗೆ ದೆಹಲಿ ಚುನಾವಣೆಯ ಪ್ರಚಾರದಲ್ಲಿ ಪ್ರಮುಖ ಪಾತ್ರ ನೀಡಲಾಗಿತ್ತು.ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಇವರು ಎಂದಿಗೂ ಪಕ್ಷ ಹಾಕಿದ ಗೆರೆಯನ್ನು ದಾಟುವುದಿಲ್ಲ ಎಂಬ ಅಭಿಪ್ರಾಯ ಪಕ್ಷದಲ್ಲಿದೆ.
ಉತ್ತಮ ಸಂವಹನ ಕಲೆಯ ಜೊತೆ ಸಂಘಟನಾ ಚಾತುರ್ಯ ಇವರಿಗಿದೆ. ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುಗಿಸಿ ಉತ್ತಮ ಫಲಿತಾಂಶ ತಂದುಕೊಟ್ಟುವ ಹೆಗ್ಗಳಿಕೆಯಿದೆ. ಎಲ್ಲರನ್ನು ಅದರಲ್ಲೂ ಮುಖ್ಯವಾಗಿ ಪಕ್ಷದ ಹಿರಿಯರನ್ನು ಜೊತೆಯಾಗಿ ನಬಿನ್ ಕರೆದುಕೊಂಡು ಹೋಗುತ್ತಾರೆ ಎಂಬ ಭಾವನೆ ಪಕ್ಷದೊಳಗಿದೆ.
ನಿತಿನ್ ನಬಿನ್ ಬಿಹಾರದ ಕಾಯಸ್ಥ ಸಮುದಾಯದಿಂದ ಬಂದಿದ್ದಾರೆ. ಚುನಾವಣಾ ಸಮಯದಲ್ಲಿ ಗೃಹ ಸಚಿವ ಅಮಿತ್ ಶಾ ನಿತಿನ್ ಮನೆಗೆ ಭೇಟಿ ನೀಡಿ ಅವರ ಸಂಘಟನಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಬಿಹಾರ ಚುನಾವಣೆಗೆ ಮೊದಲು ಜೀವಿಕಾ ದೀದಿ ಜಾಲವನ್ನು ಸಜ್ಜುಗೊಳಿಸುವ ಜವಾಬ್ದಾರಿಯನ್ನು ನಬಿನ್ ಅವರಿಗೆ ವಹಿಸಲಾಗಿತ್ತು. ಬಿಹಾರ ಮೈತ್ರಿಕೂಟ ಒಗ್ಗಟ್ಟನ್ನು ಪ್ರದರ್ಶಿಸುವ ಪ್ರಮುಖ ಎನ್‌ಎಡಿಎಎ ಸಮನ್ವಯ ಸಭೆಗಳಲ್ಲಿಯೂ ಇವರು ಭಾಗಿಯಾಗುತ್ತಿದ್ದರು.
ಛತ್ತೀಸ್‌ಗಢ ಪ್ರಚಾರದ ಸಮಯದಲ್ಲಿ ನಬಿನ್ ಅವರ ಸಂಘಟನಾ ಕೌಶಲ್ಯ ಹೈಕಮಾಂಡ್ ಗಮನಕ್ಕೆ ಬಂದಿತ್ತು. ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಚುನಾವಣಾ ಸಹ-ಉಸ್ತುವಾರಿಯಾಗಿ ಕೆಲಸ ಮಾಡಿದ್ದರು. ಚುನಾವಣೆಗೆ ಕನಿಷ್ಠ ಒಂದೂವರೆ ವರ್ಷಕ್ಕೆ ಮೊದಲು ನಬಿನ್ ವಾರದಲ್ಲಿ ಕನಿಷ್ಠ ನಾಲ್ಕು ದಿನ ಛತ್ತೀಸ್‌ಗಢಗೆ ಬರುತ್ತಿದ್ದರು. ಇದು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ವಿರುದ್ಧ ಬಿಜೆಪಿಯ ಪ್ರಚಾರಕ್ಕೆ ಭದ್ರವಾದ ಅಡಿಪಾಯ ಹಾಕಿತ್ತು.ತಾನು ಕಾರ್ಯಾಧ್ಯಕ್ಷನಾಗುತ್ತೇನೆ ಎನ್ನುವುದು ಸ್ವತಃ ನಿತಿನ್ ನಬಿನ್ ಅವರಿಗೆ ತಿಳಿದಿರಲಿಲ್ಲ.
