Saturday, September 21, 2024
Homeರಾಜ್ಯಮುಜರಾಯಿ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆಗೆ ಆದೇಶ

ಮುಜರಾಯಿ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಕೆಗೆ ಆದೇಶ

Karnataka Temples ordered to use Nandini ghee after Tirupati Laddu row

ಬೆಂಗಳೂರು, ಸೆ.21- ಆಂಧ್ರಪ್ರದೇಶದ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಪತಿಯ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಕೆ ಮಾಡಿದ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ದೇವಾಲಯಗಳ ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸಲು ರಾಜ್ಯಸ ರ್ಕಾರ ಸೂಚನೆ ನೀಡಿದೆ.

ವಿಶೇಷವೆಂದರೆ ಶುಕ್ರವಾರವಷ್ಟೇ ಮುಜರಾಯಿ ಇಲಾಖೆಯು ದೇವಾಲಯಗಳಲ್ಲಿ ಪ್ರಸಾದ ತಯಾರಿಕೆಗೆ ನಂದಿನಿ ತುಪ್ಪವನ್ನು ಕಡ್ಡಾಯವಾಗಿ ಬಳಸಬೇಕೆಂದು ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ ಬೆನ್ನಲ್ಲೇ ಇದೀಗ ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸಲು ಸೂಚಿಸಲಾಗಿದೆ.

ರಾಜ್ಯದ ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಭಕ್ತರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸಲಾಗುತ್ತದೆ. ತಿರುಪತಿ ದೇವಸ್ಥಾನದಲ್ಲಿ ಲಡ್ಡು ವಿವಾದ ಮುನ್ನಲೆಗೆ ಬಂದಿರುವ ಹಿನ್ನಲೆಯಲ್ಲಿ ಭಕ್ತರಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ಹೀಗಾಗಿ ಈ ಗೊಂದಲವನ್ನು ನಿವಾರಿಸಲು ಪ್ರಸಾದವನ್ನು ಪ್ರಯೋಗಾಲಯಕ್ಕೆ ಒಳಪಡಿಸುವುದಾಗಿ ಮುಜರಾಯಿ ಸಚಿವರಾಗಿರುವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ತಿರುಪತಿ ಲಡ್ಡು ವಿವಾದದಿಂದಾಗಿ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂಬ ಅನುಮಾನ ಎಲ್ಲೆಡೆ ಕೇಳಿಬರುತ್ತಿದೆ. ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಇದೆ. ಇದು ನಿವಾರಣೆಯಾಗಬೇಕಾದರೆ ಸರ್ಕಾರ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರಸ್ತುತ ತಿರುಪತಿ ದೇವಸ್ಥಾನಕ್ಕೆ ಲಡ್ಡು ಪ್ರಸಾದ ತಯಾರಿಸಲು ನಂದಿನಿ ತುಪ್ಪವನ್ನು ಕರ್ನಾಟಕ ಪೂರೈಸುತ್ತಿದೆ. ಕಳೆದ ವರ್ಷ, ತಿರುಪತಿ ತಿರುಮಲ ದೇವಸ್ಥಾನವು ಕೆಎಂಎಫ್‌ನ ನಂದಿನಿ ತುಪ್ಪ ಮತ್ತು ಇತರ ಉತ್ಪನ್ನಗಳ ಖರೀದಿಯನ್ನು ಬೆಲೆಯ ಕಾರಣವೊಡ್ಡಿ ನಿಲ್ಲಿಸಿತ್ತು. ಕೆಎಂಎಫ್‌ ಉಲ್ಲೇಖಿಸಿದ ಬೆಲೆಗಳನ್ನು ಟಿಟಿಡಿ ಅನುಮೋದಿಸದೆ ಇತರ ಕಂಪನಿಗಳಿಂದ ತುಪ್ಪವನ್ನು ಖರೀದಿಸಲು ಪ್ರಾರಂಭಿಸಿತ್ತು ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯಕ್‌ ತಿಳಿಸಿದ್ದರು. ಇದೀಗ ಮತ್ತೆ ಟಿಟಿಡಿ ನಂದಿನಿ ತುಪ್ಪ ಮತ್ತಿತರ ಉತ್ಪನ್ನಗಳನ್ನು ಖರೀದಿಸುತ್ತಿದೆ.

ಪ್ರಸಾದ ಖರೀದಿ ಇಳಿಕೆ:

ತಿರುಪತಿ ಲಡ್ಡು ವಿವಾದದ ನಂತರ ರಾಜ್ಯದ ಪ್ರಮುಖ ದೇವಾಲಯಗಳಿಗೆ ಬರುವ ಭಕ್ತರು ಪ್ರಸಾದವನ್ನು ಖರೀದಿಸಲು ಹಿಂದೆಮುಂದೆ ನೋಡುತ್ತಿದ್ದಾರೆ. ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಲಾಗಿದೆ ಎಂಬ ವಿವಾದ ಕೇಳಿಬರುತ್ತಿದ್ದಂತೆ ಮುಜರಾಯಿ ದೇವಾಲಯಗಳಲ್ಲಿ ಪ್ರಸಾದ ಖರೀದಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಸುಮಾರು 1.85 ಲಕ್ಷ ದೇವಾಲಯಗಳಿದ್ದು, ಈ ಪೈಕಿ ಸುಮಾರು 34,563 ದೇವಾಲಯಗಳು ಮುಜರಾಯಿ ವ್ಯಾಪ್ತಿಗೆ ಒಳಪಡುವ ದೇವಾಲಯಗಳಾಗಿವೆ. ಆದಾಯದ ಲೆಕ್ಕಾಚಾರದಲ್ಲಿ ಈ ದೇವಾಲಯಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸಲಾಗಿದೆ.
ಕರ್ನಾಟಕದಲ್ಲಿ ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಪೈಕಿ ಸುಮಾರು 207 ದೇವಾಲಯಗಳ ವಾರ್ಷಿಕ ಆದಾಯವು 25 ಲಕ್ಷ ರೂ.ಗಿಂತ ಅಧಿಕವಾಗಿದ್ದು ಇದು ಎ ಶ್ರೇಣಿಯ ದೇವಾಲಯಗಳಾಗಿದೆ.

ಹಾಗೆಯೇ 139 ದೇವಾಲಯಗಳ ಆದಾಯವು ಐದು ಲಕ್ಷ ರೂ.ನಿಂದ 25 ಲಕ್ಷ ರೂ. ನಡುವೆ ಬರುವ ಹಿನ್ನೆಲೆ ಇದು ಬಿ ಶ್ರೇಣಿಯ ದೇವಾಲಯ ಎಂದು ವರ್ಗೀಕರಿಸಲಾಗಿದೆ. ಹಾಗೆಯೇ 5 ಲಕ್ಷ ರೂ.ನಿಂದ ಕಡಿಮೆ ಆದಾಯವನ್ನು ಹೊಂದಿರುವ ದೇವಾಲಯಗಳು ಸಿ ಶ್ರೇಣಿಯ ದೇವಾಲಯಗಳೆಂದು ವರ್ಗೀಕರಿಸಲಾಗಿದೆ. ಈ ಪಟ್ಟಿಯಲ್ಲಿ 34,217 ದೇವಾಲಯಗಳಿವೆ.

ಆದರೆ ಆದಾಯದ ಪ್ರಕಾರ ಕರ್ನಾಟಕದ ಟಾಪ್‌ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳು:
ಟಾಪ್‌ 1: ಕುಕ್ಕೆ ಶ್ರೀ ಸುಬ್ರಹಣ್ಯ ಸ್ವಾಮಿ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹಣ್ಯ ಗ್ರಾಮದಲ್ಲಿರುವ ದೇವಾಲಯವಾಗಿದೆ. ಇದು ಜಿಲ್ಲೆಯ ಹಾಗೂ ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ

ಟಾಪ್‌ 1 ದೇವಾಲಯವಾಗಿದೆ. 2019ರಲ್ಲಿ ಈ ದೇವಾಲಯವು ಅಂದಾಜು 100 ಕೋಟಿ ಆದಾಯವನ್ನು ಗಳಿಸಿದೆ. ಹುಂಡಿಗೆ ಭಕ್ತರು ಹಾಕುವ ಕಾಣಿಕೆಯನ್ನು ಹೊರತುಪಡಿಸಿ, ದೇವಾಲಯಕ್ಕೆ ಬ್ಯಾಂಕ್‌ ಡೆಪಾಸಿಟ್‌ ಬಡ್ಡಿದರ, ಸೇವೆ, ದೇವಾಲಯದ ಹಾಲ್‌ ಬಾಡಿಗೆಯಿಂದಲೂ ಆದಾಯ ಲಭ್ಯವಾಗುತ್ತದೆ.

ಟಾಪ್‌ 2: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿರುವ ದೇವಾಲಯವಾಗಿದೆ. ಇದು ಹಿಂದೂ ದೇವಾಲಯವಾಗಿದ್ದು, ಮೂಕಾಂಬಿಕಾ ದೇವಿಯ ದೇವಸ್ಥಾನವಾಗಿದೆ. ಕರ್ನಾಟಕ ಮಾತ್ರವಲ್ಲದೆ, ಕೇರಳ, ಬೇರೆ ರಾಜ್ಯಗಳಿಂದ ಈ ದೇವಾಲಯಕ್ಕೆ ಭಕ್ತರು ಆಗಮಿಸುತ್ತಾರೆ. 2019ರ ಲೆಕ್ಕಾಚಾರದ ಪ್ರಕಾರ ಈ ದೇವಾಲಯದ ವಾರ್ಷಿಕ ಆದಾಯವು 90-92 ಕೋಟಿ ರೂಪಾಯಿಯಾಗಿದೆ.

ಟಾಪ್‌ 3: ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವು ಕರ್ನಾಟಕ ರಾಜ್ಯದಲ್ಲಿ ಅಧಿಕ ಭಕ್ತರು ಆಗಮಿಸುವ ದೇವಾಲಯಗಳಲ್ಲಿ ಒಂದಾಗಿದೆ. ಇದು ಮಂಗಳೂರಿನಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ದೇವಾಲಯವಾಗಿದೆ. ಕೊರೊನಾ ವೈರಸ್‌‍ ಸಾಂಕ್ರಾಮಿಕ ದೇಶದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ದೇವಾಲಯದ ಆದಾಯವು 40-42 ಕೋಟಿ ರೂ. ಆಗಿತ್ತು. ಈ ದೇವಾಲಯಕ್ಕೆ ಹುಂಡಿ, ಸೇವೆ ಹಾಗೂ ಕಾಣಿಕೆ ಮೂಲಕ ಅಧಿಕ ಆದಾಯ ಲಭ್ಯವಾಗುತ್ತದೆ.

ಟಾಪ್‌ 4: ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಮೊದಲ ಮೂರು ಸ್ಥಾನದಲ್ಲಿ ಕರಾವಳಿಯ ದೇವಾಲಯಗಳಿದ್ದರೆ ನಾಲ್ಕನೇ ಸ್ಥಾನದಲ್ಲಿ ಮೈಸೂರಿನ ಪ್ರಸಿದ್ಧ ದೇವಾಲಯವಿದೆ. ಇದು ವಿಶೇಷ ಪ್ರವೇಶ ಟಿಕೆಟ್‌ನ ಮೂಲಕ, ಪ್ರಸಾದ ರೂಪದಲ್ಲಿ ಲಡ್ಡು ಮಾರಾಟ, ಸೇವೆಗಳು, ಇ-ಸೇವೆ, ಬ್ಯಾಂಕ್‌ಗಳಲ್ಲಿ ಡೆಪಾಸಿಟ್‌ನ ಬಡ್ಡಿದರದ ಮೂಲಕ ಆದಾಯವನ್ನು ಗಳಿಸುತ್ತದೆ. 2019ರಲ್ಲಿ ದೇವಾಲಯವು 30-33 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.

ಟಾಪ್‌ 5: ನಂಜುಂಡೇಶ್ವರಿ ದೇವಾಲಯ ಅತೀ ಹಳೆಯ ದೇವಾಲಯಗಳಲ್ಲಿ ನಂಜುಂಡೇಶ್ವರಿ ದೇವಾಲಯ ಕೂಡಾ ಒಂದಾಗಿದೆ. ಇದನ್ನು ಶ್ರೀಕಂಠೇಶ್ವರ ದೇವಾಲಯ ಎಂದು ಕೂಡಾ ಕರೆಯಲಾಗುತ್ತದೆ. ಇದು ಹುಂಡಿ ಕಾಣಿಕೆ, ಸೇವೆ ಹಾಗೂ ಪ್ರಸಾದದ ಮೂಲಕ ಆದಾಯವನ್ನು ಗಳಿಸುತ್ತದೆ. 2019ರಲ್ಲಿ ದೇವಾಲಯದ ವಾರ್ಷಿಕ ಆದಾಯ 15-20 ಕೋಟಿ ರೂ. ಆಗಿದೆ.

ಟಾಪ್‌ 6: ಸವದತ್ತಿ ಯಲ್ಲಮ ದೇವಾಲಯ ಸವದತ್ತಿ ಯಲ್ಲಮ ದೇವಾಲಯವನ್ನು ರೇಣುಕಾ ದೇವಸ್ಥಾನ ಎಂದೂ ಕೂಡ ಕರೆಯಲಾಗುತ್ತದೆ. ಇದು ಬೆಳಗಾವಿಯ ಸವದತ್ತಿ ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಯಾತ್ರಾಸ್ಥಳವಾಗಿದೆ. ಪ್ರತಿ ವರ್ಷ ಅಕ್ಟೋಬರ್‌ನಿಂದ ಏಪ್ರಿಲ್‌ ತಿಂಗಳಿನಲ್ಲಿ ಎರಡು ವರ್ಷಕ್ಕೊಮೆ ಜಾತ್ರೆ ನಡೆಯುತ್ತದೆ. ಇಲ್ಲಿಗೆ ಕರ್ನಾಟಕ, ಆಂಧ್ರಪದೇಶ, ಗೋವಾ, ಮಹಾರಾಷ್ಟ್ರದಿಂದ ಭಕ್ತರು ಆಗಮಿಸುತ್ತಾರೆ. ಈ ದೇವಾಲಯದ ಆದಾಯವು 15-17 ಕೋಟಿ ರೂಪಾಯಿ ಆಗಿದೆ.

ಟಾಪ್‌ 7: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಡುಪಿ ಜಿಲ್ಲೆಯ ಬ್ರಹಾವರ ತಾಲ್ಲೂಕಿನಲ್ಲಿರುವ ಮಂದಾರ್ತಿ ಎಂಬ ಪ್ರದೇಶದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಿದೆ. ಈ ದೇವಾಲಯಕ್ಕೆ ಪೂಜೆ, ಯಕ್ಷಗಾನದ ಮೂಲಕ ಆದಾಯ ಲಭಿಸುತ್ತದೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳದಲ್ಲಿ ಐದು ಮೇಳಗಳಿವೆ. ವರ್ಷದಲ್ಲಿ 1000ಕ್ಕೂ ಅಧಿಕ ಹರಕೆ ಆಟಗಳು ನಡೆಯುತ್ತದೆ. 2027-28ರವರೆಗೆ ಈಗಾಗಲೇ ಹರಕೆ ಆಟವು ಮುಂಗಡವಾಗಿ ಭರ್ತಿಯಾಗಿದೆ. ಈ ದೇವಾಲಯದ ಆದಾಯವು 10-12 ಕೋಟಿ ರೂ. ಆಗಿದೆ.

ಟಾಪ್‌ 8: ಹುಲಿಗೆಮ ದೇವಾಲಯ, ಕೊಪ್ಪಳ ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್‌ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಕೊಪ್ಪಳದ ಹುಲಿಗೆಮ ದೇವಾಲಯ ಕೂಡಾ ಒಂದಾಗಿದೆ. ಹುಲಗಿ ಕ್ಷೇತ್ರ ಎಂಟುನೂರು ವರ್ಷಗಳ ಹಳೆಯ ದೇವಾಲಯವಾಗಿದೆ. ಕೋವಿಡ್‌ ಸಂದರ್ಭದಲ್ಲಿ ನಿರ್ಬಂಧಗಳಿದ್ದರೂ ಕೂಡಾ ಈ ದೇವಾಲಯಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ಬೇರೆ ಬೇರೆ ರಾಜ್ಯದಿಂದ ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ. ಇದರ ಆದಾಯ 8-10 ಕೋಟಿ ರೂ. ಆಗಿದೆ.

ಟಾಪ್‌ 9: ಬನಶಂಕರಿ ದೇವಸ್ಥಾನ, ಬೆಂಗಳೂರು ರಾಜ್ಯದ ರಾಜಧಾನಿ ಬೆಂಗಳೂರಿನ ಬನಶಂಕರಿ ದೇವಸ್ಥಾನವೂ ಕೂಡಾ ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್‌ 10 ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ ಒಂದಾಗಿದ್ದು, ಟಾಪ್‌ 9ನೇ ಸ್ಥಾನದಲ್ಲಿದೆ. ಇದು ಕನಕಪುರ ರಸ್ತೆಯಲ್ಲಿದೆ. ಈ ದೇವಾಲಯದ ಆದಾಯವು 8-10 ಕೋಟಿ ರೂಪಾಯಿ ಆಗಿದೆ.

ಟಾಪ್‌10: ಘಾಟಿ ಸುಬ್ರಹಣ್ಯ ದೇವಸ್ಥಾನ, ದೊಡ್ಡಬಳ್ಳಾಪುರ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಘಾಟಿ ಸುಬ್ರಹಣ್ಯ ಆದಾಯದ ಲೆಕ್ಕಾಚಾರದಲ್ಲಿ ರಾಜ್ಯದ ಟಾಪ್‌ 10 ಮುಜರಾಯಿ ವ್ಯಾಪ್ತಿಯ ದೇವಾಲಯವಾಗಿದೆ. 600 ವರ್ಷಗಳ ಇತಿಹಾಸವನ್ನು ಈ ದೇವಾಲಯವು ಹೊಂದಿದೆ. ಡಿಸೆಂಬರ್‌ ತಿಂಗಳಿನಲ್ಲಿ ಈ ದೇವಾಲಯದಲ್ಲಿ ಜಾತ್ರೆ ನಡೆಯಲಿದ್ದು, ಬೇರೆ ಬೇರೆ ರಾಜ್ಯಗಳಿಂದ ಜನರು ಆಗಮಿಸುತ್ತಾರೆ. ಈ ದೇವಾಲಯದ ಆದಾಯವು 8-10 ಕೋಟಿ ರೂಪಾಯಿ ಆಗಿದೆ.

RELATED ARTICLES

Latest News