ಬೆಂಗಳೂರು,ಸೆ.21- ಮೀಸಲಾತಿ ಕುರಿತು ಅಮೆರಿಕದ ಸಂವಾದದಲ್ಲಿ ಹೇಳಿಕೆ ನೀಡಿದ್ದ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಬಸವರಾಜ್ ಮತ್ತಿಮೋಡ, ಮಾಜಿ ಶಾಸಕ ರಾಜ್‌ಕುಮಾರ್ ತೇಲ್ಕೂರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಚ್.ವಿ.ಮಂಜುನಾಥ್, ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ವಸಂತ್‌ಕುಮಾರ್, ಶಾಸಕರು, ಮಾಜಿ ಶಾಸಕರ ನೇತೃತ್ವದಲ್ಲಿ ದೂರು ದಾಖಲಿಸಲಾಗಿದೆ.
ರಾಹುಲ್ ಗಾಂಧಿಯವರು ಮೀಸಲಾತಿ ಕುರಿತಂತೆ ನೀಡಿರುವ ಹೇಳಿಕೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಹಿಂದುಳಿದ ಸಮುದಾಯದಲ್ಲಿ ಆತಂಕ ಉಂಟಾಗಿದೆ. ಮೀಸಲಾತಿ ರದ್ದುಪಡಿಸುತ್ತೇವೆ ಎಂದು ಹೇಳಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ರಾಹುಲ್ ಗಾಂಧಿ ಮೀಸಲಾತಿಯನ್ನು ರದ್ದುಪಡಿಸುತ್ತೇವೆ ಎಂದು ಹೇಳಿರುವುದು ಸಂವಿಧಾನ ವಿರೋಧಿ ನಡೆ. ಅವರು ಲೋಕಸಭೆ ಚುನಾವಣೆ ಫಲಿತಾಂಶ ಬಂದ ಬಳಿಕ ಹತಾಶರಾಗಿದ್ದು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರು ವಿದೇಶದಲ್ಲಿ ಕುಳಿತ ಭಾರತಕ್ಕೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿದ್ದಾರೆ. ನಾವು ಅವರು ಪ್ರಬುದ್ಧರಾಗಿದ್ದಾರೆ ಅಂತ ಅಂದುಕೊಂಡಿದ್ದೆವು. ಆದರೆ ಈ ಮಾತುಗಳನ್ನ ಕೇಳಿದಾಗ ಪ್ರಬುದ್ಧರಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಇಂದಿರಾಗಾಂಧಿಯವರು ಪ್ರಧಾನಿಯಾಗಿ ವಿದೇಶಕ್ಕೆ ಹೋದಾಗ ಅಲ್ಲಿಯ ಸಂದರ್ಶಕರು ಜೈಲಿಗೆ ಹೋದಾಗ ನಿಮ ಅನುಭವ ಹೇಗಿತ್ತೆಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅದು ನನ್ನ ದೇಶದ ವಿಚಾರ ಅದನ್ನುನನ್ನ ದೇಶದಲ್ಲಿಯೇ ಮಾತನಾಡುತ್ತೇನೆ ಎಂದಿದ್ದರು. ಆದರೆ ರಾಹುಲ್ ಗಾಂಧಿಯವರು ಅವರ ಅಜ್ಜಿಯಿಂದಲೂ ಕಲಿತಿಲ್ಲ. ಹೀಗಾಗಿ ನಾವು ರಾಹುಲ್ ಗಾಂಧಿಯವರ ವಿರುದ್ಧ ದೂರು ದಾಖಲು ಮಾಡಿದ್ದೇವೆ ಎಂದು ಹೇಳಿದರು.
ಐಟಿ ಆಕ್ಟ್ ಕೆಳಗಡೆ ಅಪರಾಧ ದೇಶದ ಬಗ್ಗೆ ವಿದೇಶದಲ್ಲಿ ಕೂತು ಅಪಮಾನದ ಮಾತುಗಳನ್ನ ಹಾಡಿದ್ದಾರೆ. ಇದು ಜಾಮೀನು ರಹಿತ ಪ್ರಕರಣವಾಗಿದೆ. ಹೀಗಾಗಿ ದೂರು ದಾಖಲಿಸಿದ್ದೇವೆ. ಕೂಡಲೇ ಅವರನ್ನು ಬಂಧಿಸುವಂತೆ ನಿಯೋಗ ಒತ್ತಡ ಹಾಕಿದೆ ಎಂದರು.