ಬೆಂಗಳೂರು, ಸೆ.22- ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು, ಇತ್ತೀಚೆಗೆ ನ್ಯಾಯಾಂಗ ಪ್ರಕ್ರಿಯೆಯ ಸಂದರ್ಭದಲ್ಲಿ ತಾವು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.ವಿಚಾರಣೆಯೊಂದರ ವೇಳೆ ಮುಸ್ಲಿಂ ಬಾಹುಳ್ಯ ಪ್ರದೇಶವಾದ (ಬೆಂಗಳೂರಿನ) ಗೋರಿಪಾಳ್ಯದ ಕ್ರಿಮಿನಲ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹೆದರುತ್ತಿದ್ದಾರೆ. ಏಕೆಂದರೆ ಅದು ಪಾಕಿಸ್ತಾನದಲ್ಲಿದೆ ಎನ್ನುವ ಅವರ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಅಗಿತ್ತು.
ಅದೇ ರೀತಿ, ಮಹಿಳಾ ವಕೀಲೆಯೊಬ್ಬರ ಜೊತೆ ಕೀಳು ಅಭಿರುಚಿಯಿಂದ ಮಾತನಾಡಿದ್ದ ವಿಡಿಯೋ ಕೂಡ ವ್ಯಾಪಕವಾಗಿ ಪ್ರಸರಣಗೊಂಡಿತ್ತು. ಇವುಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚಿಸಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಿಗೇ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಮುಕ್ತ ನ್ಯಾಯಾಲಯದಲ್ಲಿ ತಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕಲಾಪ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿ ಶ್ರೀಶಾನಂದ ಅವರು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಹಿರಿಯ ವಕೀಲರ ಸಮುಖದಲ್ಲಿ,ನಾನು ವ್ಯಕ್ತಪಡಿಸಿರುವ ಅಭಿಪ್ರಾಯವು ಯಾವುದೇ ವ್ಯಕ್ತಿ ಸಮುದಾಯದ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶ ಹೊಂದಿರಲಿಲ್ಲ.
ನನ್ನ ಹೇಳಿಕೆಯಿಂದ ಯಾವುದೇ ಸಮಾಜ ಅಥವಾ ವ್ಯಕ್ತಿಯ ಮನಸ್ಸಿಗೆ ಧಕ್ಕೆಯಾಗಿದ್ದರೆ ಅಂತರಾಳದಿಂದ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಒಕ್ಕಣೆಯನ್ನು ಓದಿದರು. ನೀವು (ನ್ಯಾ.ಶ್ರೀಶಾನಂದ) ಪ್ರಾಮಾಣಿಕರಾದ ನ್ಯಾಯಮೂರ್ತಿಗಳಾಗಿದ್ದೀರಿ. ಕಿರಿಯ ವಕೀಲರಿಗೆ ತಾವು ಉತ್ತೇಜನ ನೀಡಬೇಕು.
ನಿಮ ಪೀಠದ ಮುಂದೆ ಕಿರಿಯ ವಕೀಲರು ವಾದಿಸಲು ಹೆದರುವಂತಿರಬಾರದು. ಅನಗತ್ಯ ಮಾತುಗಳನ್ನು ಆಡಬಾರದು ಎಂದು ಸಲಹೆ ನೀಡಿದ್ದೇವೆ. ಇದಕ್ಕೆ ನ್ಯಾಯಮೂರ್ತಿಗಳೂ ಸಹಮತಿಸಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.