Sunday, September 22, 2024
Homeರಾಜಕೀಯ | Politicsಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳ ವರ್ಚಸ್ಸಿಗೆ 'ಲೈಂಗಿಕ ಹಗರಣಗಳ' ಹೊಡೆತ

ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷಗಳ ವರ್ಚಸ್ಸಿಗೆ ‘ಲೈಂಗಿಕ ಹಗರಣಗಳ’ ಹೊಡೆತ

'Sex Scandals' hit BJP and JDS parties'

ಬೆಂಗಳೂರು,ಸೆ.22- ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರ ವಿರುದ್ಧದ ಸರಣಿ ಲೈಂಗಿಕ ಹಗರಣಗಳ ಆರೋಪಗಳು ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದ್ದು, ಅಲ್ಲದೆ ಕಾರ್ಯಕರ್ತರಲ್ಲೂ ಅಸಮಾಧಾನ ಮತ್ತು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಈ ಆರೋಪಗಳಿಂದಾಗಿ ವಿರೋಧ ಪಕ್ಷಗಳ ನೈತಿಕ ಬಲವನ್ನು ಕುಗ್ಗಿದ್ದು, ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಹಿನ್ನಡೆ ಉಂಟು ಮಾಡಿದೆ.

ರಮೇಶ ಜಾರಕಿಹೊಳಿ, ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ರೇವಣ್ಣ, ಮುನಿರತ್ನ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ, ಬಂಧನ ಪ್ರಸಂಗ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್‌‍ ತಪ್ಪುಗಳನ್ನು ಜನರ ಮುಂದೆ ತಂದು, ಮುಜುಗರಕ್ಕೀಡು ಮಾಡಬೇಕಾದ ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರನ್ನು ಮುಖ ಮುಚ್ಚಿಕೊಂಡು ಓಡಾಡಬೇಕಾದ ಸನ್ನಿವೇಶಕ್ಕೆ ತಂದು ನಿಲ್ಲಿಸಿದೆ.

ಇದರ ಜೊತೆಯಲ್ಲಿ ತಮ ವಿರುದ್ಧದ ಯಾವುದೇ ಅಕ್ಷೇಪಾರ್ಹ ವಿಡಿಯೋಗಳು ಬಿಡುಗಡೆ ಮಾಡಬಾರದು ಎಂದು ಕೋರ್ಟ್‌ ಗೆ ಹೋಗಿ ತಡೆ ತಂದಿರುವ ಅರ್ಧ ಡಜನ್‌ ಗೂ ಹೆಚ್ಚಿನ ನಾಯಕರು ಬಿಜೆಪಿಯಲ್ಲಿದ್ದಾರೆ. ಈ ಪೈಕಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಕೂಡಾ ಒಳಗೊಂಡಿದ್ದಾರೆ.

ಈ ನಡುವೆ ಮಾಜಿ ಸಿಎಂ ಬಿಎಸ್‌‍ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣವೂ ದಾಖಲಾಗಿದೆ. ಮಹಿಳೆಯೊಬ್ಬರು ಈ ರೀತಿಯ ಆರೋಪವನ್ನು ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್‌‍ವೈ ಬಂಧನಕ್ಕೆ ನ್ಯಾಯಾಲಯ ತಡೆ ನೀಡಿದೆ.

ಪ್ರಜ್ವಲ್‌ ರೇವಣ್ಣ, ಎಚ್‌.ಡಿ.ರೇವಣ್ಣ ಮತ್ತು ಸೂರಜ್‌ ರೇವಣ್ಣ ವಿರುದ್ಧ ಗಂಭೀರ ಸ್ವರೂಪದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಎಚ್‌.ಡಿ/ರೇವಣ್ಣ ಮತ್ತು ಸೂರಜ್‌ ರೇವಣ್ಣಗೆ ಜಾಮೀನು ಸಿಕ್ಕರೆ, ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿ ಬಂಧನದಲ್ಲಿದ್ದಾರೆ.
ಈ ಪ್ರಕರಣ ಬಿಜೆಪಿ ಮತ್ತು ಜೆಡಿಎಸ್‌‍ಗೆ ಮುಜುಗರ ಉಂಟು ಮಾಡಿದೆ.

ಹಾಸನದಲ್ಲಿ ಜೆಡಿಎಸ್‌‍ ಸೋಲಿಗೆ ಇದು ಕಾರಣವಾದರೆ, ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೂ ಇದು ಮುಜುಗರ ಉಂಟು ಮಾಡಿತ್ತು. ಇನ್ನು ಈ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧವೂ ಆರೋಪ ಕೇಳಿ ಬಂದಿತ್ತು. ಇದು ಒಂದು ಕಡೆಯಾದರೆ ಬಿಜೆಪಿಯಲ್ಲಿ ಇಂತಹ ಆರೋಪ ರಾಮದಾಸ್‌‍, ಅರವಿಂದ ಲಿಂಬಾವಳಿ ವಿರುದ್ಧವೂ ಕೇಳಿಬಂದಿತ್ತು. ಇದೆಲ್ಲವೂ ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರಿದೆ.

ಕೋಲ್ಕತ್ತಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಹೊಣೆಯನ್ನು ಹೊತ್ತು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ತುಂಬ ಗಟ್ಟಿ ಧ್ವನಿಯಲ್ಲಿ ಒತ್ತಾಯಿಸುತ್ತಿದೆ. ಇದು ಸರಿ ಕೂಡ. ಆದರೆ ಬಿಜೆಪಿ ಹಾಗೂ ಮೈತ್ರಿ ಪಕ್ಷದ ನಾಯಕರು, ಮುಖಂಡರು, ಶಾಸಕರು, ಮಾಜಿ ಸಂಸದರು, ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಕರ್ನಾಟಕದಲ್ಲಿ ಇಷ್ಟೆಲ್ಲ ಆರೋಪಗಳು ಇವೆಯಲ್ಲಾ ಇದಕ್ಕೆ ಬಿಜೆಪಿ ಹೈ ಕಮಾಂಡ್‌ ಏನು ಮಾಡುತ್ತದೆ? ಎಂಬುದು ಕೂಡ ಪ್ರಶ್ನಾರ್ಹವಾಗಿದೆ.

ಕಾರ್ಯಕರ್ತರಲ್ಲಿ ಗೊಂದಲ:
ಪಕ್ಷದಲ್ಲಿ ನಡೆಯುತ್ತಿರುವ ಈ ಎಲ್ಲಾ ಬೆಳವಣಿಗೆಗಳು ಕಾರ್ಯಕರ್ತರಲ್ಲೂ ಗೊಂದಲ ಸೃಷ್ಟಿಸಿದೆ. ಬಿಜೆಪಿ ಶಿಸ್ತಿನ ಪಕ್ಷ ಎಂದು ಕರೆದುಕೊಳ್ಳುತ್ತಿದೆ. ಆದರೆ, ಪಕ್ಷದ ನಾಯಕರ ವಿರುದ್ಧದ ಆರೋಪಗಳನ್ನು ವಿರೋಧಿಸಲು ಸಾಧ್ಯವಾಗದೆ ಸಮರ್ಥಿಸಲು ಆಗದಂತಹ ಪರಿಸ್ಥಿತಿ ಪಕ್ಷದ ಕಾರ್ಯಕರ್ತರಲ್ಲಿದೆ. ಇದಕ್ಕೆ ಜೆಡಿಎಸ್‌‍ ಪಕ್ಷದ ಕಾರ್ಯಕರ್ತರು ಹೊರತಾಗಿಲ್ಲ. ಒಟ್ಟಿನಲ್ಲಿ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳು ಕೇಳಿ ಬಂದಾಗ ಪಕ್ಷ ಏನು ಕ್ರಮ ಕೈಗೊಳ್ಳುತ್ತದೆ ಎಂಬುವುದು ಬಹಳ ಮುಖ್ಯವಾಗಿದೆ. ಕ್ರಮದ ಬದಲಾಗಿ ಸಮರ್ಥನೆಗಿಳಿದ್ದರೆ ಅದು ಪಕ್ಷದ ವರ್ಚಸ್ಸಿಗೆ ಮತ್ತಷ್ಟು ಕುಂದು ಉಂಟು ಮಾಡಲಿರುವುದು ಸತ್ಯ.

RELATED ARTICLES

Latest News