ಪುರಿ (ಒಡಿಶಾ),ಸೆ.22- ಪುರಿಯ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಎರಡನೇ ಸುತ್ತಿನ ಸಮೀಕ್ಷೆಯನ್ನು ಎಎಸ್‌ಐ ನಿನ್ನೆಯಿಂದ ಆರಂಭಿಸಿಸಲಾಗಿದೆ. ದೇವಸ್ಥಾನದಲ್ಲಿನ ಭಂಡಾರದ ಕೋಣೆಗಳ ಜಿಪಿಆರ್ ಸಮೀಕ್ಷೆಯನ್ನು ಆರಂಭಿಸಲಾಗಿದೆ. ಸೆಪ್ಟೆಂಬರ್ 23ರವರೆಗೆ ಮೂರು ದಿನಗಳ ಕಾಲ ಈ ಸಮೀಕ್ಷೆ ನಡೆಯಲಿದೆ.
ಮೊದಲ ದಿನವಾದ ಶನಿವಾರ ಜಿಪಿಆರ್ ಸಮೀಕ್ಷೆ ಪೂರ್ಣಗೊಂಡಿದ್ದು, ಪಡೆದ ದತ್ತಾಂಶವನ್ನು ಮುಂದಿನ ಮೂರು ದಿನಗಳವರೆಗೆ ವಿಶ್ಲೇಷಿಸಲಾಗುತ್ತದೆ ಎಂದು ಮುಖ್ಯ ಆಡಳಿತಾಧಿಕಾರಿ ತಿಳಿಸಿದರು.
ಸಮೀಕ್ಷೆಯ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜಿಪಿಆರ್ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಭಂಡಾರದ ಒಳಗಿನ ಗುಪ್ತ ಮತ್ತು ರಹಸ್ಯ ಕೊಠಡಿಗಳ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಹೇಳಿದ್ದಾರೆ.ಮೊದಲ ದಿನ ರತ್ನ ಭಂಡಾರದ ಮಣ್ಣಿನಡಿ ಏನಿದೆ ಎಂದು ಜಿಪಿಆರ್ ಸಮೀಕ್ಷೆ ನಡೆಸಲಾಯಿತು.
ಮೂರು ಯಂತ್ರಗಳ ನೆರವಿನಿಂದ 10 ಮೀಟರ್ ಆಳದವರೆಗೆ ಸರ್ವೆ ಮಾಡಲಾಗಿದೆ. ಇನ್ನೂ ಎರಡು ದಿನ ಈ ಸಮೀಕ್ಷೆ ನಡೆಯಲಿದೆ. ಬಳಿಕ ಪಡೆದ ಡೇಟಾವನ್ನು ವಿಶ್ಲೇಷಿಸಲಾಗುವುದು. ರತ್ನದ ಅಡಿಯಲ್ಲಿ ರಹಸ್ಯ ಕೋಣೆಗಳು, ಕೊಠಡಿಗಳು ಅಥವಾ ರತ್ನದ ಆಭರಣಗಳು ಇವೆಯೇ ಎಂಬುದು ಸ್ಪಷ್ಟವಾಗುತ್ತದೆ. ಇನ್ನೆರಡು ದಿನಗಳಲ್ಲಿ ಎಲ್ಲ ಜಿಪಿಆರ್ ಸರ್ವೆ ಕಾರ್ಯ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಜಿಪಿಆರ್ ಸಮೀಕ್ಷೆ ಮುಗಿದ ನಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎದು ತಿಳಿಸಿದ್ದಾರೆ.
46 ವರ್ಷಗಳ ಬಳಿಕ ತೆರೆದ ಖಜಾನೆ:
ಖ್ಯಾತ ಜಗನ್ನಾಥ ದೇವಾಲಯದ ಖಜಾನೆಯನ್ನು (ರತ್ನ ಭಂಡಾರ) 46 ವರ್ಷಗಳ ನಂತರ ತೆರೆಯಲಾಗಿದೆ. ಇದಕ್ಕೂ ಮೊದಲು ಮೊದಲ ಸುತ್ತಿನ ಸಮೀಕ್ಷೆಯನ್ನು ಜುಲೈ 14ರಂದು ನಡೆಸಲಾಗಿತ್ತು. ಈ ವೇಳೆ ಐದು ಪೆಟ್ಟಿಗೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನ, ಬೆಳ್ಳಿ, ಇತರ ವಸ್ತುಗಳನ್ನು ಹೊರತರಲಾಗಿತ್ತು.
ದಾಖಲೆಗಳ ಪ್ರಕಾರ, ದೇವಾಲಯದ ರತ್ನ ಭಂಡಾರದಲ್ಲಿ ಒಟ್ಟು 454 ಚಿನ್ನದ ವಸ್ತುಗಳಿವೆ. ಅದರ ಒಟ್ಟು ತೂಕ 128.38 ಕೆಜಿಯಾಗಿದೆ. 293 ಬೆಳ್ಳಿ ವಸ್ತುಗಳು ಇವೆ. ಇವುಗಳ ತೂಕ 22,153 ಗ್ರಾಂ, ಅಂದರೆ, 221.53 ಕೆಜಿ ಎಂದು ಹೇಳಲಾಗಿದೆ.
ರತ್ನ ಭಂಡಾರವನ್ನು ಕೊನೆಯ ಬಾರಿಗೆ 14 ಜುಲೈ 1985 ರಂದು ತೆರೆಯಲಾಗಿತ್ತು. ಅಂದಿನಿಂದ ಇದು ಮುಚ್ಚಲ್ಪಟ್ಟಿದೆ. ಅದರ ಕೀಲಿಯು ಕಾಣೆಯಾಗಿದೆ ಎಂದು ಹೇಳಲಾಗಿದೆ. 1905, 1926, 1978 ಮತ್ತು 1984ರಲ್ಲಿ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು ನಾಲ್ಕು ಬಾರಿ ಮಾತ್ರ ತೆರೆಯಲಾಗಿದೆ. ಇದರಲ್ಲಿ 1978ರಲ್ಲಿ ತೆರೆದು ಎಣಿಸಲಾದ ವಸ್ತುಗಳ ದಾಖಲೆಯು ಅಧಿಕೃತವಾಗಿದೆ.