Tuesday, January 13, 2026
Homeರಾಜ್ಯಜಿಬಿಎ ಚುನಾವಣೆಗೂ ಮುನ್ನವೇ ರಾಜ್ಯದಲ್ಲೂ ಎಸ್‌‍ಐಆರ್‌

ಜಿಬಿಎ ಚುನಾವಣೆಗೂ ಮುನ್ನವೇ ರಾಜ್ಯದಲ್ಲೂ ಎಸ್‌‍ಐಆರ್‌

SIR in the state even before GBA elections

ಬೆಂಗಳೂರು,ಜ.13- ದೇಶದದ್ಯಾಂತ ಭಾರೀ ವಿವಾದ ಸೃಷ್ಟಿಸಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌‍ಐಆರ್‌)ಯು ರಾಜ್ಯದಲ್ಲೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ನಡೆಯಲಿದ್ದು, ಈಗಾಗಲೇ ಪ್ರಕಟಗೊಂಡಿರುವ ಮತದಾರರ ಪಟ್ಟಿಯಲ್ಲಿ ಭಾರೀ ಬದಲಾವಣೆಯಾಗುವ ಸಂಭವವಿದೆ.
ಭಾರತೀಯ ಚುನಾವಣಾ ಆಯೋಗದ ನಿದೇರ್ಶನದಂತೆ ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಲು ರಾಜ್ಯ ಮುಖ್ಯ ಚುನಾವಣಾ ಆಯೋಗ ಪೂರ್ವ ಸಿದ್ಧತೆ ಆರಂಭಿಸಿದೆ.

ಕರ್ನಾಟಕದಲ್ಲಿ ಇತ್ತೀಚೆಗೆ ವೋಟ್‌ ಚೋರಿ (ಮತಗಳ್ಳತನ) ಆರೋಪಗಳು ಕೇಳಿಬಂದಿದ್ದವು. ಹಾಗಾಗಿ, ಕರ್ನಾಟಕದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಮುಂದಾಗಬಹುದು ಎಂದು ಅಂದಾಜಿಸಲಾಗಿದೆ.

ಮೂಲಗಳ ಪ್ರಕಾರ, ರಾಜ್ಯ ಸರ್ಕಾರವು ಏಪ್ರಿಲ್‌- ಮೇ ತಿಂಗಳ ಮಧ್ಯಭಾಗದಲ್ಲಿ ಜಿಬಿಎ ಜೊತೆಗೆ ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಗ್ರಾಮ ಪಂಚಾಯತ್‌, ತಾಲ್ಲೂಕು ಪಂಚಾಯತ್‌, ಜಿಲ್ಲಾ ಪಂಚಾಯತ್‌, ಪುರಸಭೆ, ಪಟ್ಟಣ ಪಂಚಾಯತ್‌, ನಗರ ಸಭೆ ಹಾಗೂ ಮೈಸೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ, ತುಮಕೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ, ಕಲಬುರಗಿಯ ಮಹಾನಗರ ಪಾಲಿಕೆ ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ತೀರ್ಮಾನಿಸಿದೆ.

ಈ ವೇಳೆಗೆ ವಿದ್ಯಾರ್ಥಿಗಳ ಎಲ್ಲಾ ಹಂತದ ಪರೀಕ್ಷೆಗಳು ಬಹುತೇಕ ಮುಗಿಯುತ್ತಿರುವ ಹಿನ್ನಲೆಯಲ್ಲಿ ಮತದಾನಕ್ಕೆ ಅವಶ್ಯವಿರುವ ಶಿಕ್ಷಣ ಸಂಸ್ಥೆಗಳು ಲಭ್ಯವಾಗುವ ಕಾರಣ ಜೂನ್‌ ತಿಂಗಳಲ್ಲಿ ಚುನಾವಣೆ ನಡೆಸಲು ಒಲವು ತೋರಿದೆ.ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಕಲಿ ಮತದಾನಗಳು ನಡೆದಿವೆ ಎಂದು ಇತ್ತೀಚೆಗೆ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದರು. ಪ್ರಮಖವಾಗಿ, ಬೆಂಗಳೂರಿನ ಮಹದೇವಪುರ ಹಾಗೂ ಕಲಬುರಗಿ ಜಿಲ್ಲೆಯ ಅಳಂದಾ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕವಾಗಿ ಮತಗಳ್ಳತನ ಆಗಿದೆ ಎಂಬುದು ಅವರ ವಾದವಾಗಿತ್ತು.ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್‌‍ಐಟಿ ನೇಮಿಸಿ ತನಿಖೆಗೆ ಆದೇಶಿಸಿತ್ತು. ತನಿಖೆಯು ಪ್ರಗತಿಯಲ್ಲಿದ್ದು, ಇತ್ತೀಚೆಗೆ ಆಳಂದ ಮತಗಳ್ಳತನದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿತ್ತು.

ರಾಜ್ಯ ಶಾಸಕಾಂಗ ಮತ್ತು ಸಂಸತ್ತಿಗೆ ನಿಯತಕಾಲಿಕವಾಗಿ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದಾಗಲೆಲ್ಲಾ ಹಿಂದಿನ ಮತದಾರರ ಪಟ್ಟಿಗಳು ನಿಷ್ಕ್ರಿಯವಾಗುತ್ತವೆ ಮತ್ತು ಹೊಸದು ಮಾತ್ರ ಜಾರಿಯಲ್ಲಿರುತ್ತದೆ.

ಹಿಂದಿನ ಮತದಾರರ ಪಟ್ಟಿಯನ್ನು ಉಲ್ಲೇಖಕ್ಕಾಗಿ ಮಾತ್ರ ಬಳಸಲಾಗುತ್ತದೆ. ಭಾರತ ಸಂವಿಧಾನದ 324 ನೇ ವಿಧಿಯ ಅಡಿ ವಿಶೇಷ ತೀವ್ರ ಪರಿಷ್ಕರಣೆ ಸೂಕ್ತವೆಂದು ಭಾವಿಸಿ ಆದೇಶಿಸಲು ಇಸಿಐಗೆ ಅಧಿಕಾರ ನೀಡಲಾಗಿದೆ. ಆ ಪ್ರಕಾರ ಪರಿಷ್ಕರಣೆಗಾಗಿ ಇಸಿಐ ಎಸ್‌‍ಐಆರ್‌ ಅನ್ನು ಘೋಷಿಸುತ್ತದೆ.

ಪ್ರತಿ ಭಾರತೀಯ ನಾಗರಿಕನು ತನಗೆ ಸಂಬಂಧಿಸಿದ ವಿಧಾನಮಂಡಲವು ನಿಗದಿಪಡಿಸಿದ ದಿನಾಂಕದಂದು ಕನಿಷ್ಠ 18 (ಹದಿನೆಂಟು) ವರ್ಷ ವಯಸ್ಸು ಹೊಂದಿರಬೇಕು. ವಾಸಸ್ಥಳದ ಕೊರತೆ, ಮಾನಸಿಕ ಅಸ್ವಸ್ಥತೆ, ಅಪರಾಧ ಅಥವಾ ಭ್ರಷ್ಟ, ಅಕ್ರಮಗಳ ಆಧಾರದ ಮೇಲೆ ಸಂವಿಧಾನ ಅಥವಾ ಸಂಬಂಧಿತ ಕ್ಷೇತ್ರ ನಿಗದಿ ಪಡಿಸಿರುವ ಯಾವುದೇ ಕಾನೂನು ಪ್ರಕಾರ ಅನರ್ಹನಾಗಿರದಿದ್ದಲ್ಲಿ, ಅಂತಹ ಪ್ರತಿ ವ್ಯಕ್ತಿಗೂ ಯಾವುದೇ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳುವ ಹಕ್ಕು ಇರುತ್ತದೆ.

ಜನಸಂಖ್ಯಾ ಬದಲಾವಣೆ, ನಕಲಿ ಮತ್ತು ಅನರ್ಹ ಮತ ತಡೆಗಟ್ಟುವಿಕೆ, ಚುನಾವಣಾ ವಂಚನೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಅಗತ್ಯವಾಗಿದೆ. ಯಾವುದೇ ಅರ್ಹ ಮತದಾರರನ್ನು ಮತದಾನದ ಪಟ್ಟಿಯಿಂದ ಹೊರಗಿಡದಿರುವುದು ಮತ್ತು ಅನರ್ಹ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಎಸ್‌‍ಐಆರ್‌ನ ಪ್ರಮುಖ ಉದ್ದೇಶವಾಗಿದೆ.

ಏನಿದು ಎಸ್‌‍ಐಆರ್‌ :
ಎಸ್‌‍ಐಆರ್‌ ಎಂದರೆ, ಮತದಾರರರ ಗುರುತಿನ ಚೀಟಿಗಳ ವಿಶೇಷ ಪರಿಶೀಲನೆ. ಆ ಮೂಲಕ, ಅರ್ಹ ಮತದಾರರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗುತ್ತದೆ. ಅನಧಿಕೃತವಾಗಿ ಅಥವಾ ಅಕ್ರಮವಾಗಿ ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ನಾಗರಿಕರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತದೆ.

ಈ ಹಿಂದೆ ರಾಜ್ಯದಲ್ಲಿ 2002ರಲ್ಲಿ ಎಸ್‌‍ಐಆರ್‌ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು.ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ.

ಮನೆಯಲ್ಲಿ ಯಾರೂ ಲಭ್ಯವಿರದಿದ್ದರೆ ಬಿಎಲ್‌ಒಗಳು ಮೂರು ಬಾರಿ ಭೇಟಿ ನೀಡಲಿದ್ದು, ಪಕ್ಕದ ಮನೆಯವರ ಸಹಾಯದಿಂದ ಸಂಪರ್ಕ ಸಾಧಿಸಲಿದ್ದಾರೆ. ಮತದಾರರ ಗುರುತಿನ ಚೀಟಿಯಲ್ಲಿ ಭಾವಚಿತ್ರ ಸ್ಪಷ್ಟವಾಗಿ ಇರದಿದ್ದರೆ ಮತದಾರರು ಹೊಸ ಫೋಟೋ ನೀಡಬೇಕು. ಪ್ರತಿಯೊಬ್ಬ ಮತದಾರರು ಆಯೋಗ ಕೇಳಿರುವ ಒಂದು ದಾಖಲೆಯನ್ನು ಕಡ್ಡಾಯವಾಗಿ ನೀಡಬೇಕು. ಪ್ರಸ್ತುತ ಎಸ್‌‍ಐಆರ್‌ನಲ್ಲಿ ದಾಖಲೆ ನೀಡಿದರೆ, ಮುಂದಿನ ಪರಿಷ್ಕರಣೆಯಲ್ಲಿ ಮತ್ತೆ ದಾಖಲೆ ಕೇಳುವುದಿಲ್ಲ. ಮನೆಯಲ್ಲಿ ಲಭ್ಯವಿಲ್ಲದವರು ಆನ್‌ಲೈನ್‌ನಲ್ಲೂ ಅರ್ಜಿ ಹಾಕಬಹುದು. ಎರಡು ಕಡೆ ಹೆಸರು ಇದ್ದರೆ ಫೋಟೋ ಸ್ಕ್ಯಾನಿಂಗ್‌ ಸಿಸ್ಟಮ್‌ ಮೂಲಕ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು. ಒಂದೇ ವ್ಯಕ್ತಿ ಎರಡು ಕಡೆ ಅರ್ಜಿ ಹಾಕಿದರೆ ಪ್ರಕರಣ ದಾಖಲಿಸಲಾಗುತ್ತದೆ.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರವೂ ಮತದಾರರ ಹೆಸರಿಲ್ಲದಿದ್ದರೆ ಬಿಎಲ್‌ಒಗಳು ನೀಡಿರುವ ಸಹಿ ಮಾಡಿದ ನಮೂನೆ ಮೂಲಕ ಪ್ರಶ್ನಿಸಬಹುದು. ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತಂತೆ ವಿವರ ನೀಡಲಾಗಿದೆ. ಪ್ರತಿ ಬೂತ್‌ಗೆ ಏಜೆಂಟ್‌ಗಳನ್ನು ನೇಮಕ ಮಾಡುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 55 ಸಾವಿರ ಮತಗಟ್ಟೆಗಳಿವೆ. ಎಸ್‌‍ಐಆರ್‌ಗೆ 18 ಸಾವಿರ ಬೂತ್‌ ಮಟ್ಟದ ಅಧಿಕಾರಿಗಳು ಇರಲಿದ್ದಾರೆ. ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನು ಬೂತ್‌ ಮಟ್ಟದ ಅಧಿಕಾರಿಗಳನ್ನಾಗಿ ಬಳಸಿಕೊಳ್ಳಲಾಗುವುದು.

ಈ ಹಿಂದೆ ಚುನಾವಣಾ ಆಯೋಗ ರಾಜ್ಯದ 224 ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದ್ದ ವೇಳೆ ಒಟ್ಟು ಮತದಾರರ ಸಂಖ್ಯೆ 5.37 ಕೋಟಿಗೆ ಏರಿಕೆಯಾಗಿತ್ತು.ಅಂತಿಮ ಪಟ್ಟಿಯಲ್ಲಿ ಈಗ 5,37,85,815 ಮತದಾರರು ಇದ್ದು, ಇದರಲ್ಲಿ 2,69,33,750 ಪುರುಷರು, 2,68,47,145 ಮಹಿಳೆಯರು ಇದ್ದಾರೆ. ಕರಡು ಪಟ್ಟಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ 2,77,717 ರಷ್ಟು ಗಮನಾರ್ಹವಾಗಿತ್ತು.
ಈಗ ಎಸ್‌‍ಐಆರ್‌ ನಡೆದರೆ ಮತದಾರರ ಪಟ್ಟಿಯಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಬಿಹಾರ, ಪ.ಬಂಗಾಳ, ತಮಿಳುನಾಡು, ಉ.ಪ್ರದೇಶದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ ವೇಳೆ ಲಕ್ಷಾಂತರ ನಕಲಿ ಮತದಾರರು ಪತ್ತೆಯಾಗಿದ್ದರು.

RELATED ARTICLES

Latest News