ಬೆಂಗಳೂರು, ಜ.13- ಸುಪ್ರೀಂಕೋರ್ಟ್ ನಿಗದಿ ಪಡಿಸಿರುವ ಕಾಲಮಿತಿಯಲ್ಲಿಯೇ ಗ್ರೇಟರ್ ಬೆಂಗಳೂರಿನ 5 ಮಹಾನಗರ ಪಾಲಿಕೆಗಳಿಗೂ ಚುನಾವಣೆ ನಡೆಸಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯನ್ನು ಮುಂದೂಡಲು ಮತ್ತೆ ನ್ಯಾಯಾಲಯದ ಮುಂದೆ ಕಾಲಾವಕಾಶ ಕೇಳುವುದಿಲ್ಲ. ಸುಪ್ರೀಂಕೋರ್ಟ್ ನಿನ್ನೆ ತನ್ನ ತೀರ್ಪಿನಲ್ಲಿ ಸೂಚಿಸಿರುವಂತೆ ಜೂನ್ 30ರ ಒಳಗಾಗಿಯೇ ಚುನಾವಣೆ ನಡೆಸುತ್ತೇವೆ. ಅದಕ್ಕೆ ಪೂರ್ವ ಭಾವಿಯಾಗಿ ತಯಾರಿ ಮಾಡಿಕೊಳ್ಳಲು ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲಾಗಿದೆ ಎಂದರು.
ವಾರ್ಡ್ ಪುನರ್ವಿಂಗಡಣೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಎಲ್ಲವೂ ನಡೆಯುತ್ತಿದೆ. ವಾರ್ಡ್ ಮೀಸಲಾತಿ ನಿಗದಿಗೆ ಸಂಬಂಧಪಟ್ಟಂತೆ ಆಕ್ಷೇಪಣೆ ಹೊಂದಿರುವವರು ನ್ಯಾಯಾಲಯಕ್ಕೆ ಹೋಗಲು ಮುಕ್ತ ಸ್ವಾತಂತ್ರ ಹೊಂದಿದ್ದಾರೆ. ಮಹಿಳಾ ಮೀಸಲಾತಿಯಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿರುವುದನ್ನು ಕೇಳಿದ್ದೇನೆ. ಅಂತಹ ಲೋಪಗಳಾಗಿದ್ದರೆ ಮಾರ್ಪಾಡು ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ತಾವು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಚುನಾವಣೆ ನಡೆಸುವುದು ಸರ್ಕಾರದ ಕರ್ತವ್ಯ. ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ಕಾರ್ಯಕರ್ತರಿಗೆ ಅಧಿಕಾರ ನೀಡುವುದು, ಹೊಸ ನಾಯಕತ್ವ ಹುಟ್ಟು ಹಾಕುವುದು ನಮ ಆದ್ಯತೆ ಎಂದರು.ಗ್ರೇಟರ್ ಬೆಂಗಳೂರು ಪಾಲಿಕೆಗಳ ಜೊತೆಗೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿಗಳಿಗೂ ಚುನಾವಣೆ ನಡೆಯಬೇಕಿದೆ ಎಂದರು.
ರಾಜ್ಯ ಸರ್ಕಾರಕ್ಕೆ ತನ್ನ ಕಾರ್ಯಕ್ರಮಗಳ ಮೇಲೆ ವಿಶ್ವಾಸವಿದೆ. ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಕ್ರಮಗಳು ಜನರ ಮನಸ್ಸು ಗೆದ್ದಿವೆ. ಪಾಲಿಕೆ ಚುನಾವಣೆಯಲ್ಲಿ ಜನ ನಮ ಕೈ ಬಲಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.ಚುನಾವಣೆ ಸವಾಲು ಎಂದು ತಾವು ಪರಿಗಣಿಸುವುದಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ನವರು ಫ್ರೆಂಡ್ಲಿ ಫೈಟ್ ಬದಲಾಗಿ ಲೋಕಸಭೆ ಚುನಾವಣೆಯಂತೆ ಮೈತ್ರಿ ಮಾಡಿಕೊಂಡು ನೇರವಾಗಿ ಹೋರಾಟ ಮಾಡಲಿ. ಇಲ್ಲವಾದರೆ ಪ್ರತ್ಯೇಕ ಹೋರಾಟ ಮಾಡಿ ತ್ರಿಕೋಣ ಸ್ಪರ್ಧೆ ನಡೆಯಲಿ ಎಂದು ಸವಾಲು ಹಾಕಿದರು.
