ಲಖ್ನೋ,ಸೆ.23- ದೇವರಂತೆ ಬಂದ ಕೋತಿಗಳು ಬಾಲಕಿ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಯತ್ನವನ್ನು ತಪ್ಪಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್ಪತ್‌ನ ದೌಲಾ ಗ್ರಾಮದಲ್ಲಿ ನಡೆದಿದೆ.ಆರು ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬರು ಅತ್ಯಾಚಾರ ನಡೆಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಕೋತಿಗಳ ಗುಂಪೊಂದು ಆ ವ್ಯಕ್ತಿಯ ಮೇಲೆ ದಾಳಿ ನಡೆಸಿವೆ.
ಯುಕೆಜಿ ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಿ ಪೋಷಕರಿಗೆ ನಡೆದ ವಿಷಯ ತಿಳಿಸಿದ್ದು, ವಿರೋಧಿಸಿದರೆ ತನ್ನನ್ನು ಮತ್ತು ತನ್ನ ಕುಟುಂಬದವರನ್ನು ಸಾಯಿಸುವುದಾಗಿ ಹೆದರಿಸಿದ ಎಂದು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಬಳಿಕ ಆಕೆಯ ಮನೆಯವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೋಕ್ಸೊ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಸೆ.20ರಂದು ಆರೋಪಿಯು ಬಾಲಕಿಯನ್ನು ಅಪಹರಿಸಿ, ಒಂದೆಡೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿದ್ದ. ಇದ್ದಕ್ಕಿದ್ದಂತೆ ಕೋತಿಗಳ ದಂಡು ಅಲ್ಲಿಗೆ ಧಾವಿಸಿದ್ದು, ಅವುಗಳನ್ನು ಕಂಡು ಆರೋಪಿ ಪರಾರಿಯಾಗಿದ್ದಾನೆ.
ಗ್ರಾಮದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ದೃಶ್ಯಾವಳಿಗಳಿಂದ ಆಧರಿಸಿ ಪೊಲೀಸರು ಆರೋಪಿಗೆ ಪತ್ತೆಗೆ ಮುಂದಾಗಿದ್ದಾರೆ.
ಆರೋಪಿ ಬೇರೆ ಗ್ರಾಮದ ನಿವಾಸಿಯಾಗಿದ್ದು, ಮನೆಯ ಹೊರಗೆ ಬಾಲಕಿಯ ಆಟವಾಡುತ್ತಿರುವುದನ್ನು ಗಮನಿಸಿ ತನ್ನೊಂದಿಗೆ ಬರುವಂತೆ ಮನವೊಲಿಸಿ ಅಲ್ಲಿಂದ ಆಕೆಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಕೋತಿಗಳ ದಾಳಿಯ ನಂತರ, ತಪ್ಪಿಸಿಕೊಂಡು ಹುಡುಗಿ ಮನೆಗೆ ಓಡಿ ಬಂದು ಘಟನೆಯ ಬಗ್ಗೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.