ಬೆಂಗಳೂರು, ಸೆ.25- ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಟ ದರ್ಶನ್, ರೌಡಿ ವಿಲ್ಸನ್‌ಗಾರ್ಡನ್ ನಾಗ ಹಾಗೂ ಇನ್ನಿತರರಿಗೆ ಜೈಲಿನ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ರಾಜಾತಿಥ್ಯ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ.
ಆಗ್ನೇಯ ವಿಭಾಗದ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡು ಹಲವು ಮಾಹಿತಿಗಳನ್ನು ಕಲೆಹಾಕಿ, ಹೇಳಿಕೆಗಳನ್ನು ಪಡೆದುಕೊಂಡು ವರದಿ ಸಿದ್ಧಪಡಿಸಿದ್ದಾರೆ. ಶೀಘ್ರದಲ್ಲೇ ಆಗ್ನೇಯ ಭಾಗದ ಡಿಸಿಪಿ ಸಾ.ರಾ. ಪಾತೀಮಾ ಅವರು ನಗರ ಪೊಲೀಸ್ ಆಯುಕ್ತ ದಯಾನಂದ ಅವರಿಗೆ ಈ ವರದಿಯನ್ನು ನೀಡಲಿದ್ದಾರೆ.
ಜೈಲಿನ ಕೆಲ ಅಧಿಕಾರಿ ಹಾಗೂ ಸಿಬ್ಬಂದಿ ಹಣದ ಆಮಿಷಕ್ಕೆ ಒಳಗಾಗಿ ರಾಜಾತಿಥ್ಯ ನೀಡಿದ್ದಾರೆಂಬುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಜೈಲಿನಲ್ಲಿ ನಟ ದರ್ಶನ್, ರೌಡಿ ವಿಲ್ಸನ್‌ಗಾರ್ಡನ್ ನಾಗ ಹಾಗೂ ಇನ್ನಿತರರು ಬ್ಯಾರಕ್ ಎದುರಿನ ಆವರಣದಲ್ಲಿ ಚೇರ್‌ನಲ್ಲಿ ಕುಳಿತು ಕಾಫಿ ಕುಡಿಯುತ್ತಿರುವುದು ಹಾಗೂ ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿದ್ದ ಫೋಟೋಗಳು ವೈರಲ್ ಆಗುತ್ತಿದ್ದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
ಒಂದು ಪ್ರಕರಣವನ್ನು ಎಸಿಪಿ ಹಾಗೂ ಇನ್ನೆರಡು ಪ್ರಕರಣಗಳು ಇನ್‌್ಸಪೆಕ್ಟರ್‌ಗಳು ತನಿಖೆ ಮಾಡುತ್ತಿದ್ದು, ತನಿಖೆಯ ಭಾಗವಾಗಿ ಜೈಲಿಗೆ ಭೇಟಿ ನೀಡಿ ಅಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳು, ಖೈದಿಗಳು ಹಾಗೂ ವಿಚಾರಣಾಧಿನ ಖೈದಿಗಳಿಂದ ಹೇಳಿಕೆ ಪಡೆದುಕೊಂಡಿರುವುದಲ್ಲದೆ, ಸಿಸಿ ಟಿವಿಗಳಲ್ಲಿರುವ ದೃಶ್ಯಾವಳಿಗಳನ್ನು ಆಧರಿಸಿ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದಾರೆ.