ತುಮಕೂರು, ಸೆ.27- ಪ್ರಯಾಣಿಕರ ಅನುಕೂಲಕ್ಕಾಗಿ ರಾಜಧಾನಿ ಬೆಂಗಳೂರು ಮತ್ತು ತುಮಕೂರು ನಡುವೆ ಸಂಚರಿಸುವ ವಿಶೇಷ ಮೆಮು ರೈಲಿಗೆ ಇಂದು ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಚಾಲನೆ ನೀಡಿದರು.
ಕೇಂದ್ರ ಸಚಿವರಾದ ಬಳಿಕ ತುಮಕೂರು ಜಿಲ್ಲೆಗೆ ಹಲವಾರು ಹೊಸ ಹೊಸ ರೈಲ್ವೆ ಯೋಜನೆಗಳನ್ನು ಕೊಡುಗೆಗಳನ್ನಾಗಿ ಸಚಿವರು ನೀಡುತ್ತಿದ್ದು, ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ಮೆಮು ರೈಲಿಗೆ ಹಸಿರು ನಿಶಾನೆ ನೀಡಿದ್ದಾರೆ.
ಇದರಿಂದ ಬಸ್‌ಗಳಲ್ಲಿ ಒತ್ತಡ ಕಡಿಮೆಯಾಗಲಿದೆ. ಪ್ರತಿನಿತ್ಯ ಕೆಲಸ, ವ್ಯಾಪಾರ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಪ್ರತಿನಿತ್ಯ ಸಾವಿರಾರು ಮಂದಿ ತುಮಕೂರಿನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಸಮಯಕ್ಕೆ ಸರಿಯಾಗಿ ಕೆಲಸ ಕಾರ್ಯಗಳಿಗೆ ತೆರಳಲು ಅನುಕೂಲವಾಗುವಂತೆ ಈ ಮೆಮು ರೈಲನ್ನು ಬಿಡಲಾಗಿದೆ.
ಈ ಹೊಸ ರೈಲು ಭಾನುವಾರ ಹೊರತುಪಡಿಸಿ ಆರು ದಿನವೂ ಸಂಚರಿಸಲಿದೆ. ತುಮಕೂರು ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.ಮತ್ತೆ ಈ ರೈಲು ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು 7.15ಕ್ಕೆ ತುಮಕೂರು ತಲುಪಲಿದೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಸೋಮಣ್ಣ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಜ್ಯೋತಿ ಗಣೇಶ, ಸುರೇಶ್ ಗೌಡ, ಮಾಜಿ ಸಂಸದ ಜಿ.ಎಸ್. ಬಸವರಾಜ್ ಸೇರಿದಂತೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.