ಬೆಂಗಳೂರು, ಜ. 13- ನಗರದಲ್ಲಿ ಶುಚಿತ್ವ ಕಾಪಾಡಿಕೊಳ್ಳದ ಹಲವಾರು ಪೇಯಿಂಗ್ ಗೆಸ್ಟ್ ವಸತಿ ಗೃಹಗಳಿಗೆ ಬೀಗ ಜಡಿಯಲಾಗಿದೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯ ಹತ್ತು ಪೇಯಿಂಗ್ ಗೆಸ್ಟ್ ವಸತಿ ಗೃಹಗಳಿಗೆ ಬೀಗ ಹಾಕಲಾಗಿದೆ. ಅಡುಗೆ ಕೋಣೆಗಳು ಶುಚಿತ್ವ ಇಲ್ಲದೇ ನಡೆಸುತ್ತಿರುವ ಹಿನ್ನಲೆಯಲ್ಲಿ ಪಿಜಿಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿನ ಪಿಜಿಗಳಿಗೆ ಬೀಗ ಹಾಕಲಾಗಿದೆ. ಈ ಪೇಯಿಂಗ್ ಗೆಸ್ಟ್ ವಸತಿ ಗೃಹಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ ಇರದ ಹಿನ್ನೆಲೆ ನೋಟಿಸ್ ನೀಡಲಾಗಿತ್ತು.
ಆದರೂ ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ ಕಾಪಾಡದ ಪಿಜಿಗಳ ವಿರುದ್ಧ ಕಾರ್ಯಚರಣೆ ನಡೆಸಿರುವ ಪಾಲಿಕೆ ಅಧಿಕಾರಿಗಳು 10 ಪಿಜಿಗಳಿಗೆ ಬೀಗ ಹಾಕಿದ್ದಾರೆ.
ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರದ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ತಪಾಸಣೆ ನಡೆಸಿದ 66 ಪೇಯಿಂಗ್ ಗೆಸ್ಟ್ ವಸತಿಗೃಹಗಳಗ ಮಾಲೀಕರಿಗೆ ತಿಳುವಳಿಕೆ ಪತ್ರಗಳನ್ನು ಜಾರಿ ಏಳು ದಿನಗಳ ಒಳಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು, ಕಾರ್ಯನಿರ್ವಹಣೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ.
